ತುಮಕೂರು : ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಮ್ (TVK) ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೊದಲ ಚುನಾವಣೆಯಲ್ಲೇ ಈ ಸಾಧನೆ ಮಾಡಿರುವ ವಿಜಯ್, ರಾಜಕೀಯ ಪ್ರವೇಶಕ್ಕೆ ಭಾರಿ ಯಶಸ್ಸು ತಂದಿದೆ.
ವಿಶೇಷವೆಂದರೆ, ಈ ಪಕ್ಷದಿಂದ ಸ್ಪರ್ಧಿಸಿ ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು. ದಶಕಗಳ ಹಿಂದೆ ಉದ್ಯಮಕ್ಕಾಗಿ ತಮಿಳುನಾಡಿಗೆ ವಲಸೆ ಹೋಗಿದ್ದ ಕುಟುಂಬದ ಕುಡಿ ಇಂದು ಅಲ್ಲಿನ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.

ಹೌದು.. ಶಾಸಕ ಸುನೀಲ್ ಆನಂದ್ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಬ್ಬೆಗಟ್ಟ ಹೋಬಳಿಯ ವಡಕೆಘಟ್ಟ ಗ್ರಾಮದವರು. ಸುಮಾರು 96 ವರ್ಷಗಳ ಹಿಂದೆ ತುಮಕೂರಲ್ಲಿ ತೀವ್ರ ಬರಗಾಲವಿದ್ದ ಸಂದರ್ಭದಲ್ಲಿ ಸುನೀಲ್ ಆನಂದ್ ಅವರ ಮುತ್ತಾತ ಬೋರೇಗೌಡರು ಉದ್ಯಮ ಆರಂಭಿಸುವ ಸಲುವಾಗಿ ಊರು ತೊರೆದು ತಮಿಳುನಾಡು ಸೇರಿದ್ದರು. ನಂತರ ಅವರ ಮಗ ಲಿಂಗೇಗೌಡ ಹಾಗೂ ಮೊಮ್ಮಗ ನಾಗರಾಜು ಅವರು ಅಲ್ಲಿಯೇ ನೆಲೆಸಿದರು. ನಾಗರಾಜು ಅವರ ಪುತ್ರನೇ ಈ ಸುನೀಲ್ ಆನಂದ್.
ತಮಿಳುನಾಡಿನಲ್ಲೇ ಶಿಕ್ಷಣ ಮುಗಿಸಿರುವ ಸುನೀಲ್ ಆನಂದ್ ಅವರು ಅಲ್ಲಿ ಜಮೀನ್ದಾರರಾಗಿ, ಅಡಿಕೆ ತೋಟ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಪ್ರತಿವರ್ಷ ಅವರು ತಮ್ಮ ಮೂಲ ಗ್ರಾಮವಾದ ವಡಕೆಘಟ್ಟಕ್ಕೆ ಭೇಟಿ ನೀಡುವುದನ್ನು ಮರೆತಿಲ್ಲ. ಇದೀಗ ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಸುನೀಲ್ ಆನಂದ್ ಗೆಲುವು ಸಾಧಿಸಿದ್ದಾರೆ.
ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಸುನೀಲ್ ಆನಂದ್ ಅವರು ಮೊದಲು ಎಐಎಡಿಎಂಕೆ (AIADMK) ಪಕ್ಷದಲ್ಲಿದ್ದರು. ಆದರೆ, ವಿಜಯ್ ಅವರ ಜನಪರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಒಂದು ವರ್ಷದ ಹಿಂದೆ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಇನ್ನು, ಸುನೀಲ್ ಆನಂದ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ರಾಜಕೀಯ ನಂಟಿದೆ. ಹೆಚ್ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುನೀಲ್ ಅವರ ಸಂಬಂಧಿ ಎಚ್.ಬಿ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ವಡಕೆಘಟ್ಟ ಗ್ರಾಮದಿಂದ ಶಾಸಕರಾದ ಎರಡನೇ ವ್ಯಕ್ತಿಯಾಗಿದ್ದಾರೆ. ಸುನೀಲ್ ಅವರ ಮತ್ತೊಬ್ಬ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಅವರು ಪ್ರಸ್ತುತ ತುರುವೇಕೆರೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ : ಮೇ 10ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ!



















