ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಯಲ್ಲೇ ಕೋಟ್ಯಾಂತರ ರೂ ಬೆಲೆ ಬಾಳುವ ಚಿನ್ನಾಭರಣದ ಕಳ್ಳತನ ನಡೆದಿದೆ. ಅಚ್ಚರಿಯ ವಿಚಾರವೆಂದರೆ, ಹೊರಗಿನವರಾರೂ ಈ ಕೃತ್ಯ ಎಸಗಿಲ್ಲ, ಬದಲಾಗಿ ಸಚಿವರ ತಾಯಿಯ ಸ್ವಂತ ರಕ್ತಸಂಬಂಧಿಯೇ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿದ್ದಾನೆ. ಪ್ರಕರಣವನ್ನು ಭೇದಿಸಿರುವ ಶಿವಾಜಿನಗರ ಠಾಣೆ ಪೊಲೀಸರು, ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ಅಮೀರ್ ಹಾಗೂ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು.
ಇವರಲ್ಲಿ ಸೈಯದ್ ಅಮೀರ್, ಸಚಿವ ಜಮೀರ್ ಅವರ ತಾಯಿಗೆ ಅತ್ಯಂತ ಹತ್ತಿರದ ಸಂಬಂಧಿ. ಮತ್ತೊಬ್ಬ ಆರೋಪಿ ಅಮಿರ್ ಅಹ್ಮದ್, ಸೈಯದ್ ಜೊತೆ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲುದಾರನಾಗಿದ್ದ. ಇಬ್ಬರೂ ಸೇರಿ ಈ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಸದ್ಯ ಬಂಧಿತರಿಂದ ಪೊಲೀಸರು ಬರೋಬ್ಬರಿ 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ರಿಕವರಿ ಮಾಡಿದ್ದಾರೆ.
ಉದ್ಯಮ ನಷ್ಟ ಸರಿದೂಗಿಸಲು ಕಳ್ಳತನದ ಸ್ಕೆಚ್ :
ಆರೋಪಿಗಳಿಬ್ಬರೂ ಸೇರಿ ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಇವರ ಉದ್ಯಮ ಪಾತಾಳಕ್ಕೆ ಕುಸಿದಿತ್ತು. ಆದ ನಷ್ಟವನ್ನು ಸರಿದೂಗಿಸಲು ಮತ್ತು ಸಾಲಗಾರರಿಂದ ಪಾರಾಗಲು ಹಣದ ತೀವ್ರ ಅವಶ್ಯಕತೆ ಇತ್ತು. ಎಲ್ಲಿಯೂ ಸಾಲ ಸಿಗದಿದ್ದಾಗ, ಸೈಯದ್ ತನ್ನ ಸಂಬಂಧಿಯಾದ ಸಚಿವ ಜಮೀರ್ ಮನೆಯನ್ನೇ ಟಾರ್ಗೆಟ್ ಮಾಡಿದ್ದ. ಅಲ್ಲಿಂದ ಚಿನ್ನ ಕದ್ದು, ಅದನ್ನು ಅಡವಿಟ್ಟು ಬಂದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಕೋಟ್ಯಧಿಪತಿಯಾಗುವ ದುರಾಸೆ ಈತನದ್ದಾಗಿತ್ತು.
ಸಚಿವರ ತಾಯಿಯ ರಕ್ತಸಂಬಂಧಿ ಆಗಿದ್ದರಿಂದ ಸೈಯದ್ ಅಮೀರ್‌ಗೆ ಜಮೀರ್ ಅವರ ಮನೆಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬರುತ್ತಿದ್ದ ಈತ, ಎಲ್ಲರೊಂದಿಗೂ ಅಚ್ಚುಮೆಚ್ಚಿನವನಂತೆ ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡ ಈತ, 2023ನೇ ಇಸವಿಯಿಂದಲೇ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ್ದ. ಈ ರೀತಿ ಬರೋಬ್ಬರಿ 1 ಕೆಜಿ 200 ಗ್ರಾಂ ಚಿನ್ನವನ್ನು ಲಪಟಾಯಿಸಿದ್ದರು ಎನ್ನಲಾಗಿದೆ.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವ ವಿಚಾರ ಕುಟುಂಬಸ್ಥರ ಗಮನಕ್ಕೆ ಬರುತ್ತಿದ್ದಂತೆ, ಸೈಯದ್ ಅಮೀರ್ ಅಲರ್ಟ್ ಆಗಿದ್ದ. ಪ್ರತಿದಿನ ಮನೆಗೆ ಬರುತ್ತಿದ್ದವನು ದಿಢೀರ್ ಎಂದು ಬರುವುದನ್ನು ನಿಲ್ಲಿಸಿದ್ದ. ಕುಟುಂಬದವರು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಶಿವಾಜಿನಗರ ಪೊಲೀಸರು ತಾಂತ್ರಿಕ ಜಾಲದ ಮೂಲಕ ಆರೋಪಿಗಳಿಬ್ಬರನ್ನೂ ಹೆಡೆಮುರಿ ಕಟ್ಟಿ ವಿಚಾರಣೆ ನಡೆಸಿದಾಗ ಅಸಲಿ ಬಣ್ಣ ಬಯಲಾಗಿದೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ವೃದ್ಧನ ಮೇಲೆ ಮಚ್ಚಿನಿಂದ ಹಲ್ಲೆ – ಪುಡಿ ರೌಡಿಯ ಅಟ್ಟಹಾಸ ಕ್ಯಾಮೆರಾದಲ್ಲಿ ಸೆರೆ!



















