ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಪ್ರಮುಖ ತೈಲ ಸಂಸ್ಕರಣಾ ಕೇಂದ್ರವಾದ ಫುಜೈರಾ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ಕಾರ್ಮಿಕರು ಗಾಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ನಡೆಯನ್ನು ‘ಅನಪೇಕ್ಷಿತ’ ಮತ್ತು ‘ಅಂಗೀಕಾರಾರ್ಹವಲ್ಲದ್ದು’ ಎಂದು ಕಿಡಿಕಾರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಡೆದ ಈ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಯುಎಇ ಮೇಲಿನ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ನಾನು ಖಂಡಿಸುತ್ತೇನೆ. ನಾಗರಿಕ ಮೂಲಸೌಕರ್ಯ ಹಾಗೂ ಅಮಾಯಕ ಜನರನ್ನು ಗುರಿಯಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪುವಂಥದ್ದಲ್ಲ. ಭಾರತವು ಈ ಸಂಕಷ್ಟದ ಸಮಯದಲ್ಲಿ ಯುಎಇ ಜೊತೆ ದೃಢವಾಗಿ ನಿಲ್ಲುತ್ತದೆ,” ಎಂದು ಹೇಳಿದ್ದಾರೆ. ಜೊತೆಗೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಉರಿಯುತ್ತಿರುವ ಫುಜೈರಾ ತೈಲ ಘಟಕ
ಇರಾನ್ ಉಡಾಯಿಸಿದ್ದ 15 ಕ್ಷಿಪಣಿಗಳು ಮತ್ತು 4 ಡ್ರೋನ್‌ಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ತಡೆದಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಒಂದು ಡ್ರೋನ್ ಫುಜೈರಾದ ಅತಿದೊಡ್ಡ ತೈಲ ಘಟಕಕ್ಕೆ ಅಪ್ಪಳಿಸಿದ ಪರಿಣಾಮ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯರು ಗಾಯಗೊಂಡಿದ್ದಾರೆ. ಇದರ ಜೊತೆಗೆ, ಬ್ರಿಟಿಷ್ ಮಿಲಿಟರಿ ವರದಿಗಳ ಪ್ರಕಾರ ಸಮುದ್ರದಲ್ಲಿ ಎರಡು ಸರಕು ಹಡಗುಗಳು ಸಹ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.
ಇರಾನ್ ಮತ್ತು ಓಮನ್ ನಡುವೆ ಇರುವ ‘ಹೊರ್ಮುಜ್ ಜಲಸಂಧಿ’ (Strait of Hormuz) ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೊಂಡಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲ್ಲಿ ಸಿಲುಕಿರುವ ಹಡಗುಗಳನ್ನು ಸುರಕ್ಷಿತವಾಗಿ ಹೊರತರಲು ಸೇನಾ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇರಾನ್ ಈ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗಿದ್ದು, ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಹಡಗು ಸಂಚಾರಕ್ಕೆ ಅಡ್ಡಿಪಡಿಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
ಇರಾನ್‌ನ ಸಮರ್ಥನೆ
ಈ ದಾಳಿಯನ್ನು ಇರಾನ್ ನೇರವಾಗಿ ಒಪ್ಪಿಕೊಂಡಿಲ್ಲವಾದರೂ, “ಅಮೆರಿಕದ ಮಿಲಿಟರಿ ದುಸ್ಸಾಹಸಕ್ಕೆ ಪ್ರತಿಯಾಗಿ ಈ ಘಟನೆ ಸಂಭವಿಸಿದೆ” ಎಂದು ಇರಾನ್ ಸೇನಾ ಅಧಿಕಾರಿಗಳು ಅಸ್ಪಷ್ಟ ಹೇಳಿಕೆ ನೀಡಿದ್ದಾರೆ. ಯುಎಇ ಅಥವಾ ತೈಲ ಘಟಕಗಳನ್ನು ಗುರಿಯಾಗಿಸುವ ಯಾವುದೇ ಯೋಜನೆ ತಮಗಿರಲಿಲ್ಲ ಎಂದು ಹೇಳಿರುವ ಇರಾನ್ ವಿದೇಶಾಂಗ ಸಚಿವರು, ಅಮೆರಿಕ ಮತ್ತು ಯುಎಇ ಎಚ್ಚರಿಕೆಯಿಂದ ಇರಬೇಕೆಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಮತ್ತೊಂದೆಡೆ, ಜರ್ಮನಿ ಸೇರಿದಂತೆ ಹಲವು ದೇಶಗಳು “ವಿಶ್ವವನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವುದನ್ನು ನಿಲ್ಲಿಸಿ” ಎಂದು ಇರಾನ್‌ಗೆ ಖಡಕ್ ಸೂಚನೆ ನೀಡಿವೆ.
ಇದನ್ನೂ ಓದಿ : ಬಂಗಾಳದಲ್ಲಿ ವರ್ಷಗಳಿಂದ ಮುಚ್ಚಿದ್ದ ದುರ್ಗಾ ದೇಗುಲದ ಬಾಗಿಲು ಕೊನೆಗೂ ಓಪನ್!



















