ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿರುವ (GBA) ಅಧಿಕಾರಿಗಳ ವಿರುದ್ಧ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಗಂಭೀರ ಆರೋಪಗಳನ್ನು ಮಾಡಿದೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ನ್ನು ಉಲ್ಲಂಘಿಸಿರುವ ಆಡಳಿತ ಶಾಖೆಯ ಅಧಿಕಾರಿಗಳ ನಡೆಯ ಕಾರಣದಿಂದ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸಂಘ ತಿಳಿಸಿದ್ದು, ಈ ಸಂಬಂಧ GBA ಮುಖ್ಯ ಆಯುಕ್ತರಿಗೆ ಪತ್ರ ಬರೆದು, ಕ್ರಮಕ್ಕೆ ಆಗ್ರಹಿಸಿದೆ.
2025 ಡಿಸೆಂಬರ್ 20ರಂದು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕುಂದು ಕೊರತೆ ಸಭೆಯಲ್ಲಿ ವಿಶೇಷ ಆಯುಕ್ತರು (ಆಡಳಿತ), ಉಪ ಆಯುಕ್ತರು (ಆಡಳಿತ) ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ನೌಕರರಿಗೆ ಮುಂಬಡ್ತಿ ನೀಡುವ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿತ್ತು.

ಸಭೆಯಲ್ಲಿ, ವೃಂದ ಮತ್ತು ನೇಮಕಾತಿ ನಿಯಮಾವಳಿ 2024 ಜಾರಿಗೆ ತಡವಾಗುವ ಸಾಧ್ಯತೆ ಇರುವುದರಿಂದ, ತಾತ್ಕಾಲಿಕವಾಗಿ ಅದೇ ನಿಯಮಾವಳಿಯ ಪ್ರಕಾರ ಮುಂಬಡ್ತಿಗಳನ್ನು ನೀಡಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿತ್ತು. ಜೊತೆಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಕೂಡ 2020ರ ನಿಯಮಾವಳಿಯ ಪ್ರಕಾರ ಈಗಾಗಲೇ ಮುಖ್ಯ ಅಭಿಯಂತರರು ಮತ್ತು ಅಧೀಕ್ಷಕ ಅಭಿಯಂತರರಿಗೆ ಮುಂಬಡ್ತಿ ನೀಡಲಾಗಿದೆ ಎಂದು ತಿಳಿಸಿ, ಅದೇ ರೀತಿಯಲ್ಲಿ ಇತರ ಪಾಲಿಕೆ ಅಧಿಕಾರಿ ನೌಕರರಿಗೂ ಮುಂಬಡ್ತಿ ನೀಡಬಹುದು ಎಂದು ಸೂಚಿಸಿದ್ದರು.
ಆದರೆ, ಪಾಲಿಕೆ ಅಧಿಕಾರಿ ನೌಕರರಿಗೆ ಮುಂಬಡ್ತಿ ನೀಡುವಲ್ಲಿ ವಿಳಂಬವಾಗಿರುವುದರಿಂದ ಕೆಲವರು ನಿವೃತ್ತಿಯಾಗಿದ್ದು, ಅವರಿಗೆ ಇದೀಗ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸಂಘ ಗಂಭೀರವಾಗಿ ಆರೋಪಿಸಿದೆ. ಆಡಳಿತ ಶಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿಯಮಗಳನ್ನು ಕಡೆಗಣಿಸಿ ತಿಂಗಳುಗಳ ಕಾಲ ವಿಳಂಬ ಮಾಡಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ. ಜೊತೆಗೆ, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಂಚ ಪಾಲಿಕೆಗಳ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಸಾಮೂಹಿಕ ರಜೆ ಮೂಲಕ ಹೋರಾಟ ಆರಂಭಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಜನಗಣತಿ ಕಾರ್ಯ ಮುಗಿದ ಮರುದಿನದಿಂದಲೇ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಸಂಘದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇನ್ನು ಈ ಸ್ಥಿತಿಗೆ ಆಡಳಿತ ಶಾಖೆಯ ವಿಳಂಬ ನೀತಿ ಮತ್ತು ನಿರ್ಲಕ್ಷ್ಯವೇ ನೇರ ಕಾರಣ ಎಂದು ಸಂಘ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿವೆ : ಡಿ.ಕೆ ಶಿವಕುಮಾರ್



















