ಮಂಗಳೂರು : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಇತಿಹಾಸ ರಚಿಸಿದೆ. ಕಮ್ಯುನಿಸ್ಟ್ ಪಕ್ಷದ ವಿರುದ್ಧ ದಶಕಗಳವರೆಗೆ ಹೋರಾಡಿ ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆ ಹಿಡಿದಿದ್ದ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಇಳಿಸುವಲ್ಲಿ ಬಿಜೆಪಿಯು ಕೊನೆಗೂ ಯಶಸ್ವಿಯಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಗಿದೆ. ನಗರದ PVS ಸರ್ಕಲ್ ಬಳಿ ಇರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಲಡ್ಡು ಹಂಚಿ ವಿಜಯೋತ್ಸವ ಆಚರಿಸಿದ್ದಾರೆ.
ಈ ಸಂಭ್ರಮಾಚರಣೆಯ ವೇಲೆ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ವತಃ ಚುರುಮುರಿ ತಯಾರಿಸಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಹಂಚಿದ್ದಾರೆ. ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಚುರುಮುರಿ ಸವಿದಿದ್ದನ್ನು ಸ್ಮರಿಸುತ್ತಾ ಶಾಸಕರು ಈ ವಿಭಿನ್ನ ರೀತಿಯ ಸಂಭ್ರಮಾಚರಣೆ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ಕಾರ್ಯಕರ್ತರು ‘ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ’ ಎಂಬ ಘೋಷಣೆ ಕೂಗಿದ್ದಾರೆ. ವಿಜಯೋತ್ಸವದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಮಹಿಳಾ ಕಾರ್ಯಕರ್ತರು ಕೂಡ ಜಯಘೋಷಗಳನ್ನು ಕೂಗುತ್ತಾ ಹೆಜ್ಜೆ ಹಾಕುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ ; ಬಂಗಾಳದಲ್ಲಿ ದೀದಿಯನ್ನು ಮೋದಿ ಸೋಲಿಸಿದ್ದು ಹೇಗೆ? ಇಲ್ಲಿವೆ ಬಿಜೆಪಿ ಗೆಲುವಿಗೆ ಕಾರಣಗಳು!



















