ನೆದರ್ಲೆಂಡ್: ಡಚ್ ರಾಜಮನೆತನದ ರಾಜಕುಮಾರಿಯರಾದ ಕ್ಯಾಥರೀನಾ-ಅಮಾಲಿಯಾ ಮತ್ತು ಆಕೆಯ ಕಿರಿಯ ಸಹೋದರಿ ಅಲೆಕ್ಸಿಯಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಬಲಪಂಥೀಯ (ನಾಝಿ ಬೆಂಬಲಿಗ) ವ್ಯಕ್ತಿಯೊಬ್ಬನನ್ನು ನೆದರ್ಲೆಂಡ್ ಪೊಲೀಸರು ಬಂಧಿಸಿದ್ದು, ಭಾರೀ ರಕ್ತಪಾತದ ಸಂಚೊಂದು ವಿಫಲಗೊಂಡಿದೆ. ಈ ಭೀಕರ ಹತ್ಯೆ ಸಂಚಿನ ಸುದ್ದಿ ಇದೀಗ ಯುರೋಪ್‌ನಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ.

ಹೇಗ್ ನಗರದಲ್ಲಿ 33 ವರ್ಷದ ಶಂಕಿತನನ್ನು ಪೊಲೀಸರು ಬಂಧಿಸಿದ್ದು, ಸೋಮವಾರ ಆತನ ಪ್ರಾಥಮಿಕ ವಿಚಾರಣೆ ನಡೆಯಲಿದೆ. ಬಂಧಿತನಿಂದ ವಶಪಡಿಸಿಕೊಂಡಿರುವ ಎರಡು ಕೊಡಲಿಗಳ ಮೇಲೆ ‘ಅಲೆಕ್ಸಿಯಾ’, ‘ಮೊಸಾದ್’ ಹಾಗೂ ನಾಝಿಗಳು ಬಳಸುವ ವಿವಾದಾತ್ಮಕ ಘೋಷಣೆಯಾದ ‘ಸೀಗ್ ಹೈಲ್’ ಎಂದು ಕೆತ್ತಲಾಗಿತ್ತು. ಇದರ ಜೊತೆಗೆ ಆತನ ಬಳಿ ಇದ್ದ ಕೈಬರಹದ ಚೀಟಿಯೊಂದರಲ್ಲಿ ‘ಅಮಾಲಿಯಾ’, ‘ಅಲೆಕ್ಸಿಯಾ’ ಮತ್ತು ‘ರಕ್ತಪಾತ’ ಎಂಬ ಪದಗಳಿದ್ದವು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆದರೆ, ಈ ಹತ್ಯೆ ಸಂಚಿನ ಹಿಂದಿರುವ ನಿಖರ ಉದ್ದೇಶವೇನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಇಷ್ಟೆಲ್ಲಾ ಭದ್ರತಾ ಆತಂಕಗಳ ನಡುವೆಯೂ, ಡಚ್ ರಾಜಮನೆತನವು ಸೋಮವಾರ ತಮ್ಮ ‘ಕೋನಿಂಗ್ಸ್‌ಡಾಗ್’ (ಕಿಂಗ್ಸ್ ಡೇ ಅಥವಾ ರಾಜರ ದಿನ) ಆಚರಣೆಯನ್ನು ಎಂದಿನಂತೆ ಸಂಭ್ರಮದಿಂದ ಆಚರಿಸಿದೆ. ಕಿಂಗ್ ವಿಲ್ಲೆಮ್-ಅಲೆಕ್ಸಾಂಡರ್ ಅವರ 59ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉತ್ಸವಗಳಲ್ಲಿ ರಾಜಮನೆತನದವರು ಪಾಲ್ಗೊಂಡು ಸಾರ್ವಜನಿಕರೊಂದಿಗೆ ಬೆರೆತು, ಐಸ್ ಸ್ಕೇಟಿಂಗ್‌ನಲ್ಲೂ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ರಾಜಕುಮಾರಿಯರಿಗೆ ಹಿಂದೆಯೂ ಇತ್ತು ಪ್ರಾಣಭಯ
ರಾಜಕುಮಾರಿ ಕ್ಯಾಥರೀನಾ-ಅಮಾಲಿಯಾ ಅವರ ಭದ್ರತೆಗೆ ಧಕ್ಕೆಯಾಗುತ್ತಿರುವುದು ಇದೇ ಮೊದಲೇನಲ್ಲ. 2020ರಲ್ಲಿ ವ್ಯಕ್ತಿಯೊಬ್ಬ ಆಕೆಗೆ ಅತ್ಯಾಚಾರ ಮತ್ತು ಹಿಂಸಾಚಾರದ ಬೆದರಿಕೆ ಸಂದೇಶಗಳನ್ನು ಕಳುಹಿಸಿದಾಗ, ಆಕೆ ಅಜ್ಞಾತವಾಸಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ವರ್ಷಗಳ ನಂತರ, ಭದ್ರತಾ ಕಾರಣಗಳಿಗಾಗಿ ಆಮ್‌ಸ್ಟರ್‌ಡ್ಯಾಮ್‌ನ ವಿದ್ಯಾರ್ಥಿ ನಿಲಯವನ್ನು ತೊರೆದು ಹೇಗ್‌ನಲ್ಲಿರುವ ಬಿಗಿ ಭದ್ರತೆಯ ರಾಜಮನೆತನದ ಅರಮನೆಗೆ ಮರಳಬೇಕಾಯಿತು. “ಆಕೆ ಅಮ್‌ಸ್ಟರ್‌ಡ್ಯಾಮ್‌ನಲ್ಲಿ ವಾಸಿಸುವಂತಿಲ್ಲ ಮತ್ತು ಅರಮನೆಯಿಂದ ಹೊರಗೆ ಓಡಾಡುವಂತಿಲ್ಲ, ಇದರಿಂದ ಆಕೆಯ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ” ಎಂದು ರಾಣಿ ಮ್ಯಾಕ್ಸಿಮಾ ಆಗ ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಡ್ರಗ್ ಮಾಫಿಯಾ ಬೆದರಿಕೆ
ಬೆದರಿಕೆಗಳು ಕೇವಲ ಕಿಡಿಗೇಡಿಗಳಿಂದ ಮಾತ್ರವಲ್ಲದೆ ಡ್ರಗ್ ಕಾರ್ಟೆಲ್‌ಗಳಿಂದಲೂ (ಮಾಫಿಯಾ) ಬಂದಿದ್ದವು. ಕಿಡ್ನಾಪ್ ಆಗುವ ಭೀತಿಯಿಂದ ಸ್ಪ್ಯಾನಿಷ್ ಭಾಷೆ ಬಲ್ಲ ಅಮಾಲಿಯಾ ಅವರು ನೆದರ್ಲೆಂಡ್ ತೊರೆದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಒಂದು ವರ್ಷ ನೆಲೆಸಿದ್ದರು. ಯುರೋಪ್‌ನ ಕುಖ್ಯಾತ ಡ್ರಗ್ ಲಾರ್ಡ್ ರಿಡುವಾನ್ ತಘಿ ಗ್ಯಾಂಗ್‌ನ ಆಂತರಿಕ ಸಂವಹನಗಳನ್ನು ಭೇದಿಸಿದಾಗ, ಅಮಾಲಿಯಾ ಮತ್ತು ಆಗಿನ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ಟಾರ್ಗೆಟ್ ಮಾಡಿರುವುದು ತಿಳಿದುಬಂದಿತ್ತು. ತಘಿಗೆ ಈಗ ಐದು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, 2024ರಲ್ಲಿ ಬಿಗಿ ಭದ್ರತೆಯೊಂದಿಗೆ ಅಮಾಲಿಯಾ ತಾಯ್ನಾಡಿಗೆ ಮರಳಿದ್ದಾರೆ.
ವರ್ಷಗಳ ಕಾಲ ಕಟ್ಟುನಿಟ್ಟಿನ ಭದ್ರತೆಯಲ್ಲೇ ಕಾಲ ಕಳೆದಿರುವ ರಾಜಕುಮಾರಿ ಅಮಾಲಿಯಾ, “ನಾನು ನನ್ನ ಸಾಮಾನ್ಯ ವಿದ್ಯಾರ್ಥಿ ಜೀವನವನ್ನು, ಬೀದಿಗಳಲ್ಲಿ ಓಡಾಡುವುದನ್ನು ಹಾಗೂ ಅಂಗಡಿಗಳಿಗೆ ಸುತ್ತಾಡುವುದನ್ನು ತುಂಬಾ ಮಿಸ್ ಮಾಡಿಕೊಂಡೆ” ಎಂದು ತಮ್ಮ ಕಳೆದುಕೊಂಡ ಸ್ವಾತಂತ್ರ್ಯದ ಬಗ್ಗೆ ಇತ್ತೀಚೆಗೆ ಭಾವುಕರಾಗಿ ನುಡಿದಿದ್ದರು.



















