ವಾಷಿಂಗ್ಟನ್/ಟೆಹ್ರಾನ್ : ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾಸೇನೆ ವಿಧಿಸಿರುವ ಕಠಿಣ ದಿಗ್ಬಂಧನದಿಂದಾಗಿ ಇರಾನ್‌ನ ಆರ್ಥಿಕ ಬೆನ್ನೆಲುಬಾಗಿರುವ ತೈಲ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಪೆಂಟಗನ್ ಮೂಲಗಳ ಪ್ರಕಾರ, ಈ ದಿಗ್ಬಂಧನದಿಂದಾಗಿ ಇರಾನ್ ಈವರೆಗೆ ಸುಮಾರು 4.8 ಬಿಲಿಯನ್ ಡಾಲರ್ (ಅಂದಾಜು 45,500 ಕೋಟಿ ರೂ.) ತೈಲ ಆದಾಯವನ್ನು ಕಳೆದುಕೊಂಡಿದೆ.
ಕೇವಲ ಆರ್ಥಿಕ ನಷ್ಟವಷ್ಟೇ ಅಲ್ಲದೆ, ಅಮೆರಿಕದ ಪಡೆಗಳು ಈ ಕಾರ್ಯಾಚರಣೆಯ ಅವಧಿಯಲ್ಲಿ ಇರಾನ್‌ನ ಎರಡು ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿವೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಗಲ್ಫ್ ಪ್ರದೇಶದಲ್ಲಿ ಸುಮಾರು 53 ಮಿಲಿಯನ್ ಬ್ಯಾರೆಲ್ ತೈಲವನ್ನು ಹೊತ್ತಿರುವ 31 ಟ್ಯಾಂಕರ್‌ಗಳು ಅತ್ತ ಸಾಗಲಾರದೆ ಇತ್ತ ಮರಳಲಾರದೆ ಅತಂತ್ರ ಸ್ಥಿತಿಯಲ್ಲಿ ನಿಂತಿವೆ.
ಅಮೆರಿಕದ ನೌಕಾಪಡೆಯ ತಪಾಸಣೆ ಮತ್ತು ವಶಪಡಿಸಿಕೊಳ್ಳುವಿಕೆಯ ಭೀತಿಯಿಂದಾಗಿ, ಇರಾನ್‌ನಿಂದ ಚೀನಾಕ್ಕೆ ತೈಲ ಸಾಗಿಸುವ ಹಡಗುಗಳು ಈಗ ದೀರ್ಘ ಮತ್ತು ದುಬಾರಿ ಮಾರ್ಗಗಳನ್ನು ಅವಲಂಬಿಸುವಂತಾಗಿದೆ. ಈ ನೌಕಾ ದಿಗ್ಬಂಧನವು ಜಾಗತಿಕ ತೈಲ ಸಾಗಣೆಯ ಮಾದರಿಯನ್ನೇ ಬದಲಿಸಿದ್ದು, ಇರಾನ್‌ನ ರಫ್ತು ಸಾಮರ್ಥ್ಯಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಶಾಶ್ವತ ಕದನ ವಿರಾಮಕ್ಕಾಗಿ ಅಮೆರಿಕದ ಒತ್ತಡ
ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡುವ ಉದ್ದೇಶದಿಂದ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆಗಳು ನಡೆಯುತ್ತಿವೆ. ಈ ಮಾತುಕತೆಯನ್ನು ಒಪ್ಪಿಕೊಳ್ಳುವಂತೆ ಇರಾನ್ ಮೇಲೆ ಒತ್ತಡ ಹೇರಲು ಅಮೆರಿಕ ಈ ನೌಕಾ ದಿಗ್ಬಂಧನವನ್ನು ಅಸ್ತ್ರವಾಗಿ ಬಳಸುತ್ತಿದೆ. ಹತ್ತು ದಿನಗಳ ಕದನ ವಿರಾಮದ ನಂತರ ಇರಾನ್ ‘ಹೊರ್ಮುಜ್ ಜಲಸಂಧಿ’ಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿತ್ತಾದರೂ, ಅಮೆರಿಕ ಮಾತ್ರ ತನ್ನ ದಿಗ್ಬಂಧನವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ. ಶಾಶ್ವತ ಒಪ್ಪಂದ ಏರ್ಪಡುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ವಾಷಿಂಗ್ಟನ್ ಪಟ್ಟು ಹಿಡಿದಿದೆ.
ಸಮರ ಅಂತ್ಯದ ಘೋಷಣೆ ಮಾಡಿದ ಟ್ರಂಪ್
ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಯುದ್ಧವು “ಮುಕ್ತಾಯಗೊಂಡಿದೆ” ಎಂದು ಸಂಸತ್ತಿಗೆ (ಕಾಂಗ್ರೆಸ್) ತಿಳಿಸಿದ್ದಾರೆ. ಫೆಬ್ರವರಿ 28 ರಿಂದ ಆರಂಭವಾಗಿದ್ದ ಈ ಸಂಘರ್ಷವು ಈಗ 60 ದಿನಗಳ ಕಾನೂನು ಮಿತಿಯನ್ನು ತಲುಪಿದ್ದು, ಏಪ್ರಿಲ್ 7 ರ ನಂತರ ಉಭಯ ದೇಶಗಳ ನಡುವೆ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ‘ವಾರ್ ಪವರ್ಸ್ ರೆಸಲ್ಯೂಶನ್’ ಕಾಯ್ದೆಯ ಅಡಿಯಲ್ಲಿ ಸಂಸತ್ತಿನ ಅನುಮೋದನೆ ಪಡೆಯದೆ ಯುದ್ಧ ಮುಂದುವರಿಸಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಟ್ರಂಪ್ ಈ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : 160 ಕೋಟಿ ರೂ. ಮೌಲ್ಯದ ಬಿಡಿಎ ಜಾಗ ಕಬಳಿಕೆ ಯತ್ನ : ಐವರ ವಿರುದ್ಧ FIR ದಾಖಲು



















