ನವದೆಹಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆಯನ್ನು ಮುಂದುವರೆಸಿದ್ದು, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕೆಂದು ಸೂಚಿಸಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ, ಸಿಬಿಐಗೆ ನೋಟಿಸ್ ಜಾರಿ ಮಾಡಿತ್ತು.
ಇಂದು ವಿಚಾರಣೆಯನ್ನು ಮುಂದುವರಿದಿದ್ದು, ಸೌಜನ್ಯ ತಾಯಿ ಪರ ವಕೀಲರು ಸಿಬಿಐ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ್ ರಾವ್ ಪರ ವಕೀಲರೂ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು. ಆದರೆ ಸಿಬಿಐ ಮತ್ತು ರಾಜ್ಯ ಸರ್ಕಾರದ ಪರ ವಕೀಲರು ಗೈರಾಗಿದ್ದರು ಎಂದು ತಿಳಿದುಬಂದಿದೆ.
ವಾದ ಆಲಿಸಿದ ಸುಪ್ರೀಂ ಕೋರ್ಟ್, ಸೌಜನ್ಯ ಪ್ರಕರಣದ ಎಲ್ಲಾ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು. ಈ ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆ ಸಾಕ್ಷಿಗಳಿಗೆ ಕೂಡಲೇ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹಾಗೆಯೇ ಮರು ತನಿಖೆ ಸಂಬಂಧ ತಮ್ಮ ನಿಲುವನ್ನು ಸಿಬಿಐ ಮತ್ತು ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ನೀಡಲು ಎರಡು ವಾರಗಳ ಗಡುವನ್ನು ಸುಪ್ರೀಂ ಕೋರ್ಟ್ ನೀಡಿದೆ. ಜೊತೆಗೆ ಮರುತನಿಖೆಯನ್ನು ಯಾವ ಸಂಸ್ಥೆ ನಡೆಸಬಹುದು ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದೆ.
ಇನ್ನ, ಈ ಸಂದರ್ಭದಲ್ಲೇ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿಗಳು, “ಇಂತಹ ಗಂಭೀರ ಪ್ರಕರಣದಲ್ಲಿ ನೀವು ಇಷ್ಟೊಂದು ನಿರಾಸಕ್ತಿ ತೋರುವುದು ಸರಿಯಲ್ಲ” ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ ; ಉಡುಪಿ : ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಭೀಕರ ಅಪಘಾತ – ಇಬ್ಬರು ಸಾವು, ಹಲವರು ಗಂಭೀರ!



















