ಭುವನೇಶ್ವರ : ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಕರುಳು ಹಿಂಡುವ ಹಾಗೂ ಅಷ್ಟೇ ಆಘಾತಕಾರಿಯಾದ ಘಟನೆಯೊಂದು ನಡೆದಿದೆ. ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂ. ಹಣವನ್ನು ಹಿಂಪಡೆಯಲು ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಸಮಾಧಿಯಿಂದ ಅಗೆದು ತೆಗೆದು, ಬರೋಬ್ಬರಿ 3 ಕಿಲೋಮೀಟರ್ ಬಿರುಬಿಸಿಲಿನಲ್ಲಿ ಹೊತ್ತುಕೊಂಡು ಬ್ಯಾಂಕ್‌ಗೆ ಬಂದಿದ್ದಾನೆ.
ಈ ದೃಶ್ಯ ಕಂಡ ಸ್ಥಳೀಯರು ಒಂದು ಕಡೆ ಕಣ್ಣೀರು ಹಾಕಿದರೆ, ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳ ಯಾಂತ್ರಿಕ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆಗಳಿಲ್ಲದೆ ಹಣ ನೀಡಲು ನಿರಾಕರಿಸಿದ್ದ ಬ್ಯಾಂಕ್
ಕಿಯೋಂಜಾರ್‌ನ ಡಯಾನಾಲಿ ಗ್ರಾಮದ ಜಿತು ಮುಂಡಾ ಎಂಬಾತನೇ ಈ ಅಸಹಾಯಕ ವ್ಯಕ್ತಿ. ಈತನ ಸಹೋದರಿ ಕಕ್ರಾ ಮುಂಡಾ ಎರಡು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಆಕೆಯ ಪತಿ ಹಾಗೂ ಏಕೈಕ ಮಗು ಕೂಡ ಈ ಹಿಂದೆಯೇ ಮೃತಪಟ್ಟಿದ್ದರಿಂದ ಜಿತು ಮಾತ್ರವೇ ಆಕೆಯ ಏಕೈಕ ವಾರಸುದಾರನಾಗಿದ್ದ. ಮಲ್ಲಿಪಾಸಿಯಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ ಕಕ್ರಾ ಮುಂಡಾ ಅವರ ಖಾತೆಯಲ್ಲಿದ್ದ 19,300 ರೂ.ಗಳನ್ನು ಪಡೆಯಲು ಜಿತು ಬ್ಯಾಂಕ್‌ಗೆ ತೆರಳಿದ್ದ.
ಆದರೆ, ಖಾತೆದಾರರು ಖುದ್ದಾಗಿ ಹಾಜರಾಗಬೇಕು ಅಥವಾ ಕಾನೂನುಬದ್ಧ ವಾರಸುದಾರಿಕೆ ಪ್ರಮಾಣಪತ್ರಗಳನ್ನು (Legal heir documents) ತರಬೇಕು ಎಂದು ಹೇಳಿ ಬ್ಯಾಂಕ್ ಮ್ಯಾನೇಜರ್ ಹಣ ನೀಡಲು ನಿರಾಕರಿಸಿದ್ದರು. ಯಾವುದೇ ಔಪಚಾರಿಕ ಶಿಕ್ಷಣವಿಲ್ಲದ, ವ್ಯವಸ್ಥೆಯ ನಿಯಮಗಳ ಬಗ್ಗೆ ಅರಿವಿಲ್ಲದ ಜಿತು ಮುಂಡಾ ಬಳಿ ಮರಣ ಪ್ರಮಾಣಪತ್ರವಾಗಲಿ ಅಥವಾ ಉತ್ತರಾಧಿಕಾರ ಪತ್ರವಾಗಲಿ ಇರಲಿಲ್ಲ. ಈ ಸಂಕೀರ್ಣ ಕಾನೂನು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲಾಗದೆ ಆತ ಅಸಹಾಯಕನಾಗಿ ವಾಪಸಾಗಿದ್ದ.
ಸಮಾಧಿ ಬಗೆದು ಅಸ್ಥಿಪಂಜರ ಹೊತ್ತು ತಂದ
ಬ್ಯಾಂಕ್ ಅಧಿಕಾರಿಗಳ ಮಾತುಗಳಿಂದ ಕಂಗಾಲಾಗಿದ್ದ ಜಿತು, ಸೋಮವಾರ ನೇರವಾಗಿ ಗ್ರಾಮದ ಸ್ಮಶಾನಕ್ಕೆ ತೆರಳಿ ತನ್ನ ಸಹೋದರಿಯ ಅಸ್ಥಿಪಂಜರವನ್ನು ಹೊರತೆಗೆದಿದ್ದಾನೆ. ಅದನ್ನು ಬಟ್ಟೆಯಲ್ಲಿ ಸುತ್ತಿಕೊಂಡು, ಸುಡುಬಿಸಿಲಿನಲ್ಲಿ ಮೂರು ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ತಂದಿದ್ದಾನೆ. ಬ್ಯಾಂಕ್‌ಗೆ ಆತ ಅಸ್ಥಿಪಂಜರ ತಂದ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಕನಿಷ್ಠ ಮಾನವೀಯತೆಯನ್ನೂ ತೋರದೆ, ಕೇವಲ ಕಾಗದಪತ್ರಗಳ ನಿಯಮಗಳಿಗೆ ಜೋತುಬಿದ್ದಿದ್ದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ಸರಪಂಚ್ ಅವರ ಬಳಿ ವಿಚಾರಿಸುವ ಮೂಲಕ ಅಥವಾ ಸ್ಥಳ ಪರಿಶೀಲನೆ ನಡೆಸುವ ಮೂಲಕ ಬ್ಯಾಂಕ್ ಅಧಿಕಾರಿಗಳು ಈ ಬಡವನಿಗೆ ಸಹಾಯ ಮಾಡಬಹುದಿತ್ತು. ಆದರೆ, ಮಾನವೀಯತೆಗಿಂತ ಕಾಗದಪತ್ರಗಳೇ ಮೇಲಾಯಿತೇ? ಒಬ್ಬ ಬಡವ ತನ್ನದೇ ಹಣ ಪಡೆಯಲು ಇಷ್ಟೊಂದು ಕಷ್ಟಪಡಬೇಕೇ ಎಂದು ಗ್ರಾಮಸ್ಥರು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ಮಧ್ಯಪ್ರವೇಶ
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಸ್ಥಿಪಂಜರ ಹೊತ್ತು ತಂದಿದ್ದ ಜಿತು ಮುಂಡಾನನ್ನು ಸಮಾಧಾನಪಡಿಸಿದ್ದಾರೆ. ಈ ಸೂಕ್ಷ್ಮ ಪ್ರಕರಣವನ್ನು ಮಾನವೀಯತೆಯ ಆಧಾರದ ಮೇಲೆ ಬಗೆಹರಿಸುವುದಾಗಿ ಭರವಸೆ ನೀಡಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಡ ಹಾಗೂ ಅನಕ್ಷರಸ್ಥ ಜನರು ತಮ್ಮ ಹಕ್ಕಿನ ಹಣವನ್ನು ಪಡೆಯಲು ವ್ಯವಸ್ಥೆಯ ಮುಂದೆ ಎಷ್ಟರಮಟ್ಟಿಗೆ ಅಸಹಾಯಕವಾಗುತ್ತಾರೆ ಎಂಬುದಕ್ಕೆ ಈ ಘಟನೆ ಜ್ವಲಂತ ನಿದರ್ಶನವಾಗಿ ನಿಂತಿದೆ
ಇದನ್ನೂ ಓದಿ : ಕೇಂದ್ರ ಸರ್ಕಾರದ BEML ಸಂಸ್ಥೆಯಲ್ಲಿ 10 ಹುದ್ದೆಗಳ ನೇಮಕ : ಸಂದರ್ಶನದ ದಿನಾಂಕ ಇಲ್ಲಿದೆ



















