ಬೆಂಗಳೂರು : ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತನಿಷ್ಕಾ (Tanishka) ಹಾಗೂ ತೇಜಸ್ವಿನಿ (Tejaswini) ಇಬ್ಬರು ನಾಪತ್ತೆಯಾಗಿ ಬರೋಬ್ಬರಿ 3 ತಿಂಗಳು ಕಳೆದಿದ್ದು, ಇದುವರೆಗೂ ವಿದ್ಯಾರ್ಥಿನಿಯರು ಎಲ್ಲಿದ್ದಾರೆ ಎಂಬ ಸಣ್ಣ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ.
ತನಿಷ್ಕಾ ಮತ್ತು ತೇಜಸ್ವಿನಿ ಸುಳಿವು ಸಿಗದ ಹಿನ್ನೆಲೆ ಪೊಲೀಸರು ಕಂಗಲಾಗಿ ಹೋಗಿದ್ದಾರೆ. ಎಷ್ಟೇ ಹುಡುಕಿದರು ಇಬ್ಬರು ಸಿಗದ ಹಿನ್ನೆಲೆ ಪೋಷಕರು ವಿದ್ಯಾರ್ಥಿನಿಯರ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ವಿದ್ಯಾರ್ಥಿನಿಯರ ಪತ್ತೆಗೆ ಕೈಗೊಂಡ ಕ್ರಮಗಳ ಬಗ್ಗೆ ಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದ್ದು, ತಾಂತ್ರಿಕವಾಗಿ ಹಾಗೂ ಹೊರ ರಾಜ್ಯದ ಪೊಲೀಸರ ನೆರವಿನಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸೋಮವಾರ ಮತ್ತೆ ಹೈಕೋರ್ಟ್‌ನಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದ್ದು, ಸಿಬಿಐಗೆ ಪ್ರಕರಣ ವರ್ಗಾವಣೆ ಆಗುವ ಸಾಧ್ಯತೆಯಿದೆ.
ಸದ್ಯ ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರು, ತನಿಷ್ಕಾ ಹಾಗೂ ತೇಜಸ್ವಿನಿ ಬಗ್ಗೆ ಹೊರ ರಾಜ್ಯದ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಹಂಚಿಕೆ ಮಾಡಲಾಗಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ನಾಲ್ಕು ರಾಜ್ಯಗಳಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. .
ಪ್ರಕರಣದ ಹಿನ್ನೆಲೆ :
ಕಳೆದ ಜನವರಿ 31ರಂದು ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ತನಿಷ್ಕಾ, ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಇಬ್ಬರು ನಾಪತ್ತೆಯಾಗಿದ್ದಾರೆ. ಕೈಯಲ್ಲಿ ಕೇವಲ ಮೂರು ಸಾವಿರ ರೂಪಾಯಿ ಇಟ್ಟುಕೊಂಡು ಇಬ್ಬರು ಮನೆ ಬಿಟ್ಟು ಬಂದಿದ್ದರು. ಅಲ್ಲದೆ ಇಬ್ಬರು ವಿದ್ಯಾರ್ಥಿನಿಯರು ಫೋನ್ ಮತ್ತು ಎಟಿಎಂ ಕಾರ್ಡ್‌ಗಳನ್ನು ಈವರೆಗೆ ಬಳಸಿಲ್ಲ, ಇದಷ್ಟೇ ಅಲ್ಲದೆ ಯಾರನ್ನೂ ಕೂಡ ಸಂಪರ್ಕ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆಧಾರ್ ಕಾರ್ಡ್ ಬಳಸಿ ಫ್ರೀ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಒಮ್ಮೆ ಮಲೆಮಹದೇಶ್ವರ ಬೆಟ್ಟದವರೆಗೂ ಇವರ ಸುಳಿವು ಸಿಕ್ಕಿತ್ತಾದರೂ, ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಇಬ್ಬರು ಅಲ್ಲಿಂದಲೂ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ದೇಶದಲ್ಲಿ ರಣಬಿಸಿಲು – 10 ರಾಜ್ಯಗಳಲ್ಲಿ ಹೈ ಅಲರ್ಟ್, ಬಾಂಡಾದಲ್ಲಿ ದಾಖಲೆಯ 47.4 ಡಿಗ್ರಿ ತಾಪಮಾನ



















