ನೋಯ್ಡಾ/ನವದೆಹಲಿ : ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅಶ್ಲೀಲ ಭಾಷೆಯಿಂದ ನಿಂದಿಸಿ ನಂತರ ಕ್ಷಮಾಪಣೆ ಕೇಳಿರುವ 15 ವರ್ಷದ ಬಾಲಕಿಯ ಕುಟುಂಬಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಮಾಧ್ಯಮಗಳ ಮುಂದೆ ಬಂದು ತಮ್ಮ ಕುಟುಂಬಕ್ಕೆ ತುರ್ತು ರಕ್ಷಣೆ ನೀಡುವಂತೆ, ಮಗಳ ಮೇಲಿನ ಎಫ್‌ಐಆರ್ (FIR) ಹಿಂಪಡೆಯುವಂತೆ ಹಾಗೂ ಪ್ರಧಾನಿ ಮೋದಿ ಅವರೇ ತಮ್ಮ ಮಗಳನ್ನು ದತ್ತು ಪಡೆದು ಹಕ್ಕುಗಳನ್ನು ನೀಡುವಂತೆ ಭಾವುಕ ಮನವಿ ಮಾಡಿದ್ದಾರೆ.
ಮನೆಯಲ್ಲಿ ಇರಲಾಗದ ಪರಿಸ್ಥಿತಿ: ತಾಯಿಯ ಅಳಲು
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಕಿಯು, ನಂತರ ಎರಡು ಬಾರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾಳೆ. ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿ ಸರಿದಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದರೂ, ಬಾಲಕಿಯ ಕುಟುಂಬಕ್ಕೆ ತೊಂದರೆ ತಪ್ಪಿಲ್ಲ. “ನಾವು ನಮ್ಮ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ, ಪೊಲೀಸರು ಹಾಗೂ ಸಮಾಜದ ಭೀತಿಯಿಂದಾಗಿ ಹೊರಗೆ ಬದುಕುವಂತಾಗಿದೆ. ನಮಗೆ ಸುರಕ್ಷಿತ ವಾಸಸ್ಥಳ ಮತ್ತು ರಕ್ಷಣೆ ಬೇಕು” ಎಂದು ಬಾಲಕಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.
ಅತ್ಯಾಚಾರದ ಬೆದರಿಕೆ ಹಾಕುವವರ ವಿರುದ್ಧ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಗೆ ಬರುತ್ತಿರುವ ಅಶ್ಲೀಲ ಕಮೆಂಟ್‌ಗಳು ಮತ್ತು ಬೆದರಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತಾಯಿ, “ನನ್ನ ಮಗಳು ಒಂದು ತಪ್ಪು ಮಾಡಿರಬಹುದು, ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾಳೆ. ಆದರೆ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಬೇಕು ಎಂದು ಜನರು ಕಮೆಂಟ್ ಮಾಡುತ್ತಿರುವುದು ಸರಿಯೇ? ಅವರ ಐಡಿಗಳು ಅಲ್ಲಿಯೇ ಇವೆ, ಅವರ ವಿರುದ್ಧ ಏಕೆ ಕ್ರಮವಿಲ್ಲ? ನನ್ನ ಮಗಳು ಬೆಳೆದು ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸೈನಿಕಳಾಗಲಿ ಎಂಬುದು ನನ್ನ ಆಸೆಯಾಗಿತ್ತು, ಆದರೆ ಇಂತಹ ನೀಚ ಬೆದರಿಕೆಗಳನ್ನು ಕೇಳಲು ನಾನು ತಯಾರಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಏನಾದರೂ ಆದರೆ ಪ್ರಧಾನಿಯವರನ್ನು ಹೊಣೆ ಮಾಡಬೇಡಿ’
ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ನಮಗೆ ಏನಾದರೂ ಅಪಾಯ ಸಂಭವಿಸಿದರೆ, ಸಮಾಜಘಾತುಕ ಶಕ್ತಿಗಳು ತಕ್ಷಣವೇ ಅದನ್ನು ನರೇಂದ್ರ ಮೋದಿ ಅಥವಾ ಅವರ ಬೆಂಬಲಿಗರು ಮಾಡಿಸಿದ್ದು ಎಂದು ರಾಜಕೀಯವಾಗಿ ತಿರುಚಬಹುದು. ಆದ್ದರಿಂದ ನಮಗೆ ತಕ್ಷಣವೇ ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ನೀಡಬೇಕು. ಬಾಲಕಿಯ ದಿವಂಗತ ತಂದೆಯ ಮನೆಯಲ್ಲಿ ಆಕೆಗೆ ಸಿಗಬೇಕಾದ ಸೂಕ್ತ ಹಕ್ಕುಗಳು ಮತ್ತು ಸ್ಥಾನ ಸಿಗಬೇಕು, ಪ್ರಧಾನಿ ಮೋದಿಯವರೇ ನನ್ನ ಮಗಳನ್ನು ದತ್ತು ತೆಗೆದುಕೊಳ್ಳಲಿ” ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ವಿಡಿಯೋ ಸಂದೇಶದ ಮೂಲಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ವಿರುದ್ಧ ಬಳಸಿದ ಭಾಷೆಯಿಂದ ನೋವಾಗಿದ್ದರೂ ಸಹ, “ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡುವುದು ಸಹಜ. ಅವರನ್ನು ದಂಡಿಸುವ ಅಥವಾ ಕಾನೂನು ಪ್ರಕ್ರಿಯೆಗಳಲ್ಲಿ ಸಿಲುಕಿಸಿ ಸಾಮಾಜಿಕವಾಗಿ ಅಪಮಾನಿಸುವ ಬದಲು, ದಾರಿ ತಪ್ಪಿರುವವರನ್ನು ತಿದ್ದಿ ಸರಿದಾರಿಗೆ ತರಬೇಕು” ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಹೇಳಿಕೆಯನ್ನು ಸ್ವಾಗತಿಸಿದ್ದ ಬಾಲಕಿಯು, ತಾನು ಮಾಡಿದ ದೊಡ್ಡ ತಪ್ಪಿಗೆ ನಾಚಿಕೆಪಡುತ್ತಿದ್ದು, ಭವಿಷ್ಯದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಬಾಳುವುದಾಗಿ ಎರಡನೇ ಬಾರಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಳು.
ಇದನ್ನೂ ಓದಿ : ‘ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ’ : ಹೃತಿಕ್ ರೋಷನ್‌ಗೆ ಕಂಗನಾ ರಣಾವತ್ ಟಾಂಗ್!


















