ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಋತುವಿನಲ್ಲಿ ಪ್ಲೇ-ಆಫ್ ಹಂತಕ್ಕೇರುವ ನಿಟ್ಟಿನಲ್ಲಿ ಹೋರಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ಗೋಚರಿಸಿದೆ.
ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣ, ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ನಂತರ ತಂಡದೊಂದಿಗೆ ಪ್ರಯಾಣಿಸಿಲ್ಲ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಅವರು ನೇರವಾಗಿ ತಮ್ಮ ಮನೆಗೆ ತೆರಳಿದ್ದಾರೆ. ಹೀಗಾಗಿ, ಏಪ್ರಿಲ್ 26 ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಿರುತ್ತಾರೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.
ರೇವಾಸ್ಪೋರ್ಟ್ಸ್‌ನ ಕ್ರೀಡಾ ಪತ್ರಕರ್ತ ರೋಹಿತ್ ಜುಗ್ಲಾನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಪ್ರಮುಖ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕುಟುಂಬದ ತುರ್ತು ಕೆಲಸದ ನಿಮಿತ್ತ ಮುಂಬೈನಿಂದ ತಂಡದೊಂದಿಗೆ ಮರಳದ ರುತುರಾಜ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಇಂದೇ (ಏಪ್ರಿಲ್ 25) ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಸದ್ಯ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಮುಂದಿನ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿ ಎಂಬಂತಿದೆ. ಕಳೆದ ವರ್ಷ ಪ್ಲೇ-ಆಫ್ ತಲುಪಲು ವಿಫಲವಾಗಿದ್ದ ಸಿಎಸ್‌ಕೆ, ಈ ಬಾರಿ ರುತುರಾಜ್ ಅವರ ನಾಯಕತ್ವದಲ್ಲಿ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ. ಮುಂಬೈ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಈ ಲಯವನ್ನು ಕಾಯ್ದುಕೊಳ್ಳಲು ನಾಯಕನ ಉಪಸ್ಥಿತಿ ಅತ್ಯಂತ ಅವಶ್ಯಕವಾಗಿದೆ.
ನಾಯಕನಾಗಿ ರುತುರಾಜ್ ಗಾಯಕ್ವಾಡ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದರೂ, ಬ್ಯಾಟರ್ ಆಗಿ ಅವರ ಕಳಪೆ ಫಾರ್ಮ್ ತಂಡದ ಆತಂಕವನ್ನು ಹೆಚ್ಚಿಸಿದೆ. ಈ ಬಾರಿಯ ಋತುವಿನಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಅವರು ಕೇವಲ 14.85 ರ ಸರಾಸರಿ ಹಾಗೂ 119.54 ರ ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 104 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಆರಂಭಿಕ ಜೊತೆಯಾಟಗಾರ ಸಂಜು ಸ್ಯಾಮ್ಸನ್ ಅವರೊಂದಿಗೆ ಉತ್ತಮ ಜೊತೆಯಾಟ ನಿರ್ಮಿಸುವ ಪ್ರಯತ್ನದಲ್ಲಿ ರುತುರಾಜ್ ಬಹಳ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವುದು ಟೀಕೆಗೆ ಗುರಿಯಾಗಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ತಂಡವು ಗೆಲುವಿನ ಹಳಿಗೆ ಮರಳಬೇಕಾದರೆ, ನಾಯಕ ರುತುರಾಜ್ ಫಾರ್ಮ್‌ಗೆ ಮರಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಸಿಎಸ್‌ಕೆ ತಂಡವು ಕೊನೆಯ 5 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದು, +0.118 ನೆಟ್ ರನ್ ರೇಟ್ ಹೊಂದಿದೆ.
ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದರೂ, ನಾಯಕನಾಗಿ ರುತುರಾಜ್ ಗಾಯಕ್ವಾಡ್ ಎಲ್ಲರ ಮನಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ನಂತರ ಅವರು ಆಡಿದ ಮಾತುಗಳು ಅವರ ನಾಯಕತ್ವದ ಗುಣವನ್ನು ಎತ್ತಿ ತೋರಿಸಿವೆ. ಇತ್ತೀಚೆಗಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿರುವ ತಂಡದ ಯುವ ಬೌಲರ್ ಮುಖೇಶ್ ಚೌಧರಿ ಅವರಿಗೆ ಮುಂಬೈ ವಿರುದ್ಧದ ಗೆಲುವನ್ನು ಅರ್ಪಿಸುವ ಮೂಲಕ ರುತುರಾಜ್ ಹೃದಯವಂತಿಕೆ ಮೆರೆದಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನು ಮುಖೇಶ್ ಅವರನ್ನು ಬೆಂಬಲಿಸಲು ಬಯಸಿದ್ದನು ಮತ್ತು ಅವರಿಗಾಗಿಯೇ ಈ ಪಂದ್ಯವನ್ನು ಗೆದ್ದಿದ್ದೇವೆ ಎಂದು ರುತುರಾಜ್ ಹೇಳಿದ್ದಾರೆ. ಇದೀಗ ಗುಜರಾತ್ ವಿರುದ್ಧದ ಪಂದ್ಯಕ್ಕೆ ಅವರು ಸಮಯಕ್ಕೆ ಸರಿಯಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ : IPL ‘ಸ್ಲ್ಯಾಪ್‌ಗೇಟ್’ ವಿವಾದ : ಜಾಹೀರಾತಿನ ಮೂಲಕ 1 ಕೋಟಿ ರೂ.ಗಳಿಸಿದ ಹರ್ಭಜನ್ ವಿರುದ್ಧ ಸಿಡಿದೆದ್ದ ಶ್ರೀಶಾಂತ್!



















