ನವದೆಹಲಿ : ಕೇಂದ್ರ ಸರ್ಕಾರದ ಉದ್ದೇಶಿತ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಯನ್ನು ಟೀಕಿಸುತ್ತಾ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಡಿಯಿಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಸೂದೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವ ಅವರು, ಈ ಮಸೂದೆಯು ತಮಿಳುನಾಡಿನ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಆರೋಪಿಸಿ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶನದ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.
ಭಾರತದ ಚುನಾವಣಾ ಪ್ರಾತಿನಿಧ್ಯ ವ್ಯವಸ್ಥೆಯನ್ನೇ ಬದಲಿಸಬಲ್ಲ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದಿನಿಂದ(ಏ.16) ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ.
ಈ ಹಿನ್ನೆಲೆಯಲ್ಲಿ ಕಪ್ಪು ಉಡುಪು ಧರಿಸಿ, ಕಪ್ಪು ಬಾವುಟ ಹಾರಿಸುವ ಮೂಲಕ ಸ್ಟಾಲಿನ್ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯ ಗಾತ್ರ ಹಾಗೂ ಸಂಯೋಜನೆಯನ್ನು ಬದಲಾಯಿಸಲು ಪ್ರಸ್ತಾಪಿಸಿರುವ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026’ ರ ಪ್ರತಿಯನ್ನು ದಹಿಸಿದ ಅವರು, ಇದೊಂದು “ಕರಾಳ ಶಾಸನ” ಎಂದು ಜರೆದಿದ್ದಾರೆ.
ತಮಿಳರನ್ನು ನಿರಾಶ್ರಿತರನ್ನಾಗಿಸುವ ಯತ್ನ: ಸ್ಟಾಲಿನ್ ಆಕ್ರೋಶ
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಕುರಿತು ಸುದೀರ್ಘ ಸಂದೇಶ ಹಂಚಿಕೊಂಡಿರುವ ಮುಖ್ಯಮಂತ್ರಿ ಸ್ಟಾಲಿನ್, ರಾಜ್ಯದಾದ್ಯಂತ ತೀವ್ರ ಪ್ರತಿರೋಧಕ್ಕೆ ಕರೆ ನೀಡಿದ್ದಾರೆ. “ಫ್ಯಾಸಿಸ್ಟ್ ಬಿಜೆಪಿಯ ದುರಹಂಕಾರ ಪತನವಾಗಲಿ. ಈ ಮಸೂದೆಯು ತಮಿಳರನ್ನು ತಮ್ಮದೇ ನೆಲದಲ್ಲಿ ನಿರಾಶ್ರಿತರನ್ನಾಗಿ ಮಾಡಲಿದೆ,” ಎಂದು ಗುಡುಗಿದ್ದಾರೆ.
ಹಿಂದಿ ಹೇರಿಕೆ ವಿರುದ್ಧದ ಐತಿಹಾಸಿಕ ಹೋರಾಟಗಳನ್ನು ನೆನಪಿಸಿಕೊಂಡಿರುವ ಅವರು, ಅಂದಿನ ಹೋರಾಟಗಳು ದೆಹಲಿಯನ್ನು ಮಣಿಸಿದ್ದವು; ಅದೇ ಮಾದರಿಯಲ್ಲಿ ಈ ಪ್ರಸ್ತಾವನೆಯ ವಿರುದ್ಧವೂ ದ್ರಾವಿಡ ನಾಡಿನಾದ್ಯಂತ ಜನಾಂದೋಲನ ರೂಪುಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವಂತೆಯೂ ಅವರು ಕರೆ ನೀಡಿದ್ದಾರೆ.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ
ಸ್ಟಾಲಿನ್ ಅವರ ಕರೆಯ ಮೇರೆಗೆ ತಿರುಚಿನಾಪಳ್ಳಿಯ ತೆನ್ನೂರಿನಲ್ಲಿರುವ ತಮ್ಮ ನಿವಾಸದಲ್ಲಿ ಕಪ್ಪು ಬಾವುಟ ಹಾರಿಸಿ ಪ್ರತಿಭಟಿಸಿದ ತಮಿಳುನಾಡು ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಯೋಜನೆಯು ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಪ್ರಾಬಲ್ಯವನ್ನು ವಿಪರೀತವಾಗಿ ಹೆಚ್ಚಿಸಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕರಡು ವರದಿಯನ್ನು ವಿರೋಧ ಪಕ್ಷಗಳೊಂದಿಗೆ ಹಂಚಿಕೊಂಡಿಲ್ಲ ಎಂದಿರುವ ಅವರು, ಒಕ್ಕೂಟ ವ್ಯವಸ್ಥೆಯ ಕುರಿತು ಸಾಮೂಹಿಕ ಚರ್ಚೆಯಾಗಬೇಕಿತ್ತು ಎಂದಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲೇ ಮಸೂದೆ ಮಂಡಿಸುತ್ತಿರುವುದು ಕೇಂದ್ರದ ದುರುದ್ದೇಶವನ್ನು ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರದ ಪ್ರಸ್ತಾವನೆಯಲ್ಲೇನಿದೆ?
ಪ್ರಸ್ತುತ 543 ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ಇದೀಗ ಆರಂಭವಾಗಿರುವ 3 ದಿನಗಳ ವಿಶೇಷ ಅಧಿವೇಶನದಲ್ಲಿ, 2027ರ ಜನಗಣತಿಗೂ ಮುನ್ನವೇ ಸಾಂವಿಧಾನಿಕ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ವಿಂಗಡಣೆ ಹಾಗೂ 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಮುಂಬರುವ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, 2011ರ ಜನಗಣತಿ ಆಧರಿಸಿ ಕ್ಷೇತ್ರ ವಿಂಗಡಣೆ ಮಾಡುತ್ತಿರುವುದು ವಿರೋಧ ಪಕ್ಷಗಳ ಪ್ರಬಲ ವಿರೋಧಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸಂಸತ್ತಿನಲ್ಲಿ ಮಹಾಸಂಘರ್ಷಕ್ಕೆ ನಾಂದಿ ಹಾಡಲಿರುವ 3 ಮಸೂದೆಗಳ ಮರ್ಮವೇನು?



















