ಬೆಂಗಳೂರು : ಚಲಾವಣೆ ರದ್ದಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ಬದಲಾಯಿಸಲು ಯತ್ನಿಸಿದ 52 ವರ್ಷದ ವ್ಯಕ್ತಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗಶೆಟ್ಟಿಹಳ್ಳಿಯ ನಿವಾಸಿಯಾಗಿರುವ ಬಂಧಿತ ಆರೋಪಿ. ಈತ ಏಪ್ರಿಲ್ 9ರಂದು ನೃಪತುಂಗ ರಸ್ತೆಯ ಆರ್‌ಬಿಐ ಕಚೇರಿಗೆ ಭೇಟಿ ನೀಡಿದ್ದ. ತನ್ನ ಬಳಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 300ಕ್ಕೂ ಅಧಿಕ ನೋಟುಗಳನ್ನು ನೀಡಿ 7 ಲಕ್ಷ ರೂ.ಗೂ ಹೆಚ್ಚು ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಎನ್ನಲಾಗಿದೆ. ಆದರೆ, ಅಧಿಕಾರಿಗಳು ಅನುಮಾನಗೊಂಡು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ.
ಈ ಬಗ್ಗೆ ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ನಕಲಿ ನೋಟುಗಳನ್ನು ನೀಡಿದವರು ಯಾರು ಮತ್ತು ಅವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು 2023ರಲ್ಲಿ ಆರ್‌ಬಿಐ ಚಲಾವಣೆಯಿಂದ ಹಿಂಪಡೆದಿದೆ. ಆದರೆ ಸಾರ್ವಜನಿಕರಿಗೆ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಲು ಅವಕಾಶವಿದೆ.
ಇದನ್ನೂ ಓದಿ : ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ತೈಲ ಕಂಪನಿಗಳು ಹೊರುತ್ತಿರುವ ನಷ್ಟವೆಷ್ಟು ಗೊತ್ತೇ?


















