ತುಮಕೂರು : ತುಮಕೂರಿನಲ್ಲಿ ದಯಾಮರಣ ಕೋರಿ ಮನವಿ ಮಾಡಿದ್ದ ಮಹಿಳೆಗೆ ಗೃಹ ಸಚಿವ ಜಿ. ಪರಮೇಶ್ವರ್ ಭರವಸೆಯ ಮಾತು ನೀಡಿದ್ದಾರೆ. ಮಹಿಳೆಗೆ ಆರು ತಿಂಗಳ ಮನೆ ಬಾಡಿಗೆ ವೆಚ್ಚ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿರುವ ಸಚಿವರು, ಆರು ತಿಂಗಳ ಬಳಿಕ ಮನೆ ನೀಡುವುದಾಗಿ ಕೂಡ ತಿಳಿಸಿದ್ದಾರೆ.
ಈ ತಿಂಗಳ 8ರಂದು ತುಮಕೂರಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಜನಸಂದರ್ಶನ ಕಾರ್ಯಕ್ರಮದಲ್ಲಿ ಶಿರಾ ತಾಲ್ಲೂಕಿನ ರಾಬಿಯಾ ಎಂಬ ಮಹಿಳೆ ವೇದಿಕೆಯ ಮೇಲೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ನೀಡಿದ ಮನೆ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ, ಸಚಿವರ ಎದುರೇ ದಯಾಮರಣಕ್ಕೆ ಬೇಡಿಕೆ ಇಟ್ಟು ಹೈಡ್ರಾಮ ಸೃಷ್ಟಿಸಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲು ಹಾಡು ಹಾಡಿ ಮನವಿ ಮಾಡಿದ್ದರು. ನಂತರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದಿದ್ದ ರಾಬಿಯಾ, ಗೃಹ ಸಚಿವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ.
ಭೇಟಿ ವೇಳೆ ಶಿರಾ ಪ್ರದೇಶದಲ್ಲಿ ಮನೆ ಒದಗಿಸುವುದಾಗಿ, ಜೊತೆಗೆ ಪ್ರಸ್ತುತ ವಾಸಿಸುತ್ತಿರುವ ಮನೆಯ 6 ತಿಂಗಳ ಬಾಡಿಗೆ ಮತ್ತು ರೇಷನ್ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಪೊಲೀಸ್ರಿಗೆ ತಲೆನೋವಾದ ವಿದ್ಯಾರ್ಥಿನಿಯರ ನಾಪತ್ತೆ ಕೇಸ್.. 2 ವರೆ ತಿಂಗಳಾದ್ರೂ ನೋ ಕ್ಲೂ!


















