ಪಟ್ನಾ : ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ಕುಮಾರ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಬಿಹಾರದ ನೂತನ ಸಿಎಂ ಆಗಿ ಬಿಜೆಪಿ ಅಭ್ಯರ್ಥಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ.
ನಿತೀಶ್‌ಕುಮಾರ್ ಅವರ ಸ್ಥಾನಕ್ಕೆ ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಸಾಮ್ರಾಟ್ ಚೌಧರಿ ಅವರು ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ್ ರಾಯ್ ಅವರ ಹೆಸರೂ ಚರ್ಚೆಯಲ್ಲಿತ್ತು. ಮಂಗಳವಾರವೇ ಬಿಜೆಪಿ ಹಾಗೂ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತಿಮವಾಗಿ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 15 ಕ್ಕೆ ಪ್ರಮಾಣ ವಚನ
ಬುಧವಾರ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
2017 ರಲ್ಲಿ ಬಿಜೆಪಿ ಸೇರಿದ್ದ ಚೌಧರಿ
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಹೊಂದಿದ್ದರೆ, ಜೆಡಿಯು 85 ಸ್ಥಾನಗಳನ್ನು ಹೊಂದಿದೆ. ಸಾಮ್ರಾಟ್ ಚೌಧರಿ ಅವರು ನಿತೀಶ್‌ಕುಮಾರ್ ಅವರ ಮಾಜಿ ಆಪ್ತ ಶಕುನಿ ಚೌಧರಿ ಅವರ ಪುತ್ರ. 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಒಬಿಸಿಗೆ ಸೇರಿದ ಚೌಧರಿ ಅವರು ಪ್ರಸ್ತುತ ತಾರಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
10 ಬಾರಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಅಧಿಕಾರ ಅಂತ್ಯ
ಸುಮಾರು ಎರಡು ದಶಕಗಳ ಕಾಲ ಬಿಹಾರದ ಚುಕ್ಕಾಣಿ ಹಿಡಿದಿದ್ದ ಹಾಗೂ ಬರೋಬ್ಬರಿ 10 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಅಧಿಕಾರ ಕೊನೆಯಾಗಿದೆ. ಇಂದು ಮಧ್ಯಾಹ್ನ ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ ಬಳಿಕ, ಲೋಕಭವನದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಕಳೆದ ವಾರವಷ್ಟೇ ನಿತೀಶ್ ಕುಮಾರ್ ಅವರು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ : ಪೋಪ್ ಅವರ ದಿಟ್ಟ ನಿಲುವಿಗೆ ಹ್ಯಾಟ್ಸ್ಆಫ್ : ವ್ಯಾಟಿಕನ್ ಬೆಂಬಲಕ್ಕೆ ನಿಂತ ಇರಾನ್!



















