ಲಕ್ನೋ : ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕಾಗಿ ಫ್ಯಾಕ್ಟರಿ ಕಾರ್ಮಿಕರು ಸೋಮವಾರದಿಂದ ಆರಂಭಿಸಿರುವ ಹಿಂಸಾತ್ಮಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ವ್ಯವಸ್ಥಿತವಾದ ‘ಡಿಜಿಟಲ್ ಸಂಚು’ ಇರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಭಾನುವಾರ ತಡರಾತ್ರಿ ವಾಟ್ಸ್ಆ್ಯಪ್ ಗ್ರೂಪ್‌ಗಳು ಮತ್ತು ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಸಾವಿರಾರು ಕಾರ್ಮಿಕರನ್ನು ಒಗ್ಗೂಡಿಸಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ವಾಟ್ಸ್ಆ್ಯಪ್ ಮೂಲಕ ಪ್ರಚೋದನಕಾರಿ ಸಂದೇಶ
ಹರ್ಯಾಣ ಸರ್ಕಾರವು ಕೌಶಲರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿದ ಬೆನ್ನಲ್ಲೇ ಅದೇ ಮಾದರಿಯಲ್ಲಿ ನಮ್ಮ ವೇತನವನ್ನೂ ಹೆಚ್ಚಿಸಬೇಕೆಂದು ಆಗ್ರಹಿಸಿ ನೋಯ್ಡಾದಲ್ಲೂ ಪ್ರತಿಭಟನೆ ಭುಗಿಲೆದ್ದಿತ್ತು. ತನಿಖೆಯ ಪ್ರಕಾರ, ‘ವರ್ಕರ್ಸ್ ಮೂವ್‌ಮೆಂಟ್’ ಸೇರಿದಂತೆ ಹಲವು ಹೆಸರಿನ ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ರಚಿಸಿ, ಕ್ಯೂಆರ್ ಕೋಡ್‌ಗಳ ಮೂಲಕ ಕಾರ್ಮಿಕರನ್ನು ಸೇರಿಸಿಕೊಳ್ಳಲಾಗಿತ್ತು. ಈ ಗುಂಪುಗಳಲ್ಲಿ ಉದ್ರೇಕಕಾರಿ ಸಂದೇಶಗಳನ್ನು ಹರಡುವ ಮೂಲಕ ಸೋಮವಾರ ಸುಮಾರು 40,000 ಕಾರ್ಮಿಕರು ರಸ್ತೆಗಿಳಿಯುವಂತೆ ಮಾಡಲಾಗಿತ್ತು. ನೋಯ್ಡಾದ ಸೆಕ್ಟರ್ 63 ಮತ್ತು ಫೇಸ್-2 ಪ್ರದೇಶಗಳಲ್ಲಿ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಪಾಕಿಸ್ತಾನಿ ನಂಟು?
ಈ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆಯೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಂಕೆ ವ್ಯಕ್ತಪಡಿಸಿದೆ. ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜ್‌ಭರ್ ಅವರು ಮಾತನಾಡಿ, “ಇತ್ತೀಚೆಗೆ ಮೀರತ್ ಮತ್ತು ನೋಯ್ಡಾದಲ್ಲಿ ಬಂಧಿತರಾದ ಭಯೋತ್ಪಾದಕರಿಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕವಿರುವುದು ಸಾಬೀತಾಗಿದೆ. ಈ ಪ್ರತಿಭಟನೆಯೂ ರಾಜ್ಯದ ಶಾಂತಿ ಕದಡುವ ಸಂಚಿನ ಭಾಗವಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕಾರ್ಮಿಕರು ಶಾಂತವಾಗಿ ಚದುರಿದ ನಂತರ ಹೊರ ಜಿಲ್ಲೆಗಳಿಂದ ಬಂದ ತಂಡವೊಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ.
300ಕ್ಕೂ ಹೆಚ್ಚು ಮಂದಿ ಬಂಧನ
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇತರರನ್ನು ಗುರುತಿಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕಾರ್ಮಿಕರ ಆಕ್ರೋಶ ತಣಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಮಧ್ಯಂತರ ವೇತನ ಹೆಚ್ಚಳವನ್ನು ಘೋಷಿಸಿದೆ. ಇದರಂತೆ ಕುಶಲ ಮತ್ತು ಕೌಶಲರಹಿತ ಕಾರ್ಮಿಕರ ವೇತನದಲ್ಲಿ ಶೇ. 21ರಷ್ಟು ಏರಿಕೆ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ಆದರೆ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ಬಿಜೆಪಿ ‘ಬಿಗ್ ಆಫರ್’ : ಮಹಿಳೆಯರಿಗೆ ಮಾಸಿಕ 2,000ರೂ., 3 ಸಿಲಿಂಡರ್ ಉಚಿತ ಸೇರಿ ಭರಪೂರ ಭರವಸೆ!



















