ವಾಷಿಂಗ್ಟನ್ : ಒಂದು ಸುತ್ತಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಇದೀಗ ಅಮೆರಿಕ-ಇರಾನ್ ನಡುವಿನ ಆರು ವಾರಗಳ ಸುದೀರ್ಘ ಯುದ್ಧಕ್ಕೆ ವಿರಾಮ ಹಾಡುವ ಪ್ರಯತ್ನಗಳು ಮತ್ತೆ ಚುರುಕುಗೊಂಡಿವೆ. ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಸುದೀರ್ಘ ಮುಖಾಮುಖಿ ಮಾತುಕತೆಯು ಯಾವುದೇ ತೀರ್ಮಾನವಿಲ್ಲದೆ ಅಂತ್ಯಗೊಂಡ ನಂತರ ಈ ಗುರುವಾರ ಮತ್ತೊಂದು ಸುತ್ತಿನ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಎರಡು ವಾರಗಳ ಕಾಲ ಘೋಷಿಸಲಾಗಿದ್ದ ತಾತ್ಕಾಲಿಕ ಕದನ ವಿರಾಮವು ಏಪ್ರಿಲ್ 21ಕ್ಕೆ ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳು ಮುಂದಾಗಿವೆ. ಇರಾನ್ ತನ್ನ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ವೈಯಕ್ತಿಕವಾಗಿ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ಸುತ್ತಿನ ಮಾತುಕತೆಗೆ ಇಸ್ಲಾಮಾಬಾದ್ ಅಥವಾ ಜಿನೀವಾ ನಗರಗಳನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇಸ್ಲಾಮಾಬಾದ್ ಮಾತುಕತೆ:
ಕಳೆದ ಭಾನುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ಪರವಾಗಿ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ನೇತೃತ್ವದ ನಿಯೋಗಗಳು ಭಾಗವಹಿಸಿದ್ದವು. “ಮಾತುಕತೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಇರಾನ್ ನಮ್ಮ ನಿಲುವುಗಳತ್ತ ಒಲವು ತೋರುತ್ತಿದೆ, ಆದರೆ ಅದು ಸಾಲದು” ಎಂದು ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ. ಸಂಧಾನ ಪ್ರಕ್ರಿಯೆಯಲ್ಲಿ ಸ್ಟೀವ್ ವಿಟ್ಕಾಫ್ ಮತ್ತು ಜೇರ್ಡ್ ಕುಶ್ನರ್ ಕೂಡ ಭಾಗಿಯಾಗಿದ್ದರು.
ಬಗೆಹರಿಯದ ಬಿಕ್ಕಟ್ಟು
ಮಾತುಕತೆಯ ಹಾದಿಯಲ್ಲಿ ಹಲವು ಕಠಿಣ ಸವಾಲುಗಳು ಎದುರಾಗಿದ್ದವು. ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದು ಮತ್ತು ಅದನ್ನು ತೆರೆಯಲು ಅಮೆರಿಕ ಪಟ್ಟು ಹಿಡಿದಿರುವುದು ಪ್ರಮುಖ ಸಂಘರ್ಷದ ಬಿಂದುವಾಗಿದೆ.
ಇದರೊಂದಿಗೆ ಇರಾನ್‌ನ ಪರಮಾಣು ಯೋಜನೆಗಳು ಮತ್ತು ಅಂತಾರಾಷ್ಟ್ರೀಯ ನಿರ್ಬಂಧಗಳ ಬಗ್ಗೆಯೂ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಏಪ್ರಿಲ್ 21ರ ಗಡುವು ಸಮೀಪಿಸುತ್ತಿದ್ದಂತೆ ಉಭಯ ರಾಷ್ಟ್ರಗಳು ಯುದ್ಧವನ್ನು ಕೊನೆಗಾಣಿಸಲು ತೀವ್ರ ಒತ್ತಡದಲ್ಲಿವೆ. ಈ ಗುರುವಾರ ನಡೆಯಲಿರುವ ಸಂಭಾವ್ಯ ಮಾತುಕತೆಯು ಪಶ್ಚಿಮ ಏಷ್ಯಾದ ಶಾಂತಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ಅಂಬೇಡ್ಕರ್ ಜಯಂತಿಯಂದೇ ಬೀದಿಗೆ ಇಳಿದ ಯುವಶಕ್ತಿ.. ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ತಯಾರಿ



















