ಚಂಡೀಗಢ : ನಾಯಕ ಶ್ರೇಯಸ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು. 220 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿ ಗೆಲುವು ಸಾಧಿಸಿತು.
ಚೇಸಿಂಗ್ ಶುರು ಮಾಡಿದ ಪಂಜಾಬ್ ಪ್ರಭ್ ಸಿಮ್ರನ್‌ಸಿಂಗ್, ಪ್ರಿಯಾಂಶ್ ಆರ್ಯ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಮೊದಲ 7 ಓವರ್‌ಗಳಲ್ಲೇ ಶತಕ ಬಾರಿಸಿತ್ತು. ನಂತರ ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ನಾಯಕನ ಆಟವಾಡಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಅಯ್ಯರ್ 33 ಎಸೆತಗಳಲ್ಲಿ 5 ಸಿಕ್ಸ್, 5 ಬೌಂಡರಿಗಳೊಂದಿಗೆ 69 ರನ್ ಚಚ್ಚಿದ್ರೆ, ಪ್ರಿಯಾಂಶ್ ಆರ್ಯ 20 ಎಸೆತಗಳಲ್ಲಿ 57 ರನ್, ಪ್ರಭ್‌ಸಿಮ್ರನ್ ಸಿಂಗ್ 25 ಎಸೆತಗಳಲ್ಲಿ 51 ರನ್ ಗಳಿಸಿದರು. ಇನ್ನುಳಿದಂತೆ ಶಶಾಂಕ್ ಸಿಂಗ್ 16 ರನ್, ನೇಹಾಲ್ ವಧೇರಾ 14 ರನ್ ಹಾಗೂ ಕೊನೋಲಿ 11 ರನ್ ಗಳಿಸಿದರು. ಪಂಜಾಬ್ ಪರ ಬೌಲಿಂಗ್ ಮಾಡಿ ಆರ್ಷದೀಪ್ ಸಿಂಗ್, ಶಶಾಂಕ್ ಸಿಂಗ್ ತಲಾ 2 ವಿಕೆಟ್ ಕಿತ್ತರು. ಬಾರ್ಟ್ಲೆಟ್ 1 ವಿಕೆಟ್ ಪಡೆದುಕೊಂಡರು.
ಇದಕ್ಕೂ ಮುನ್ನ ಬ್ಯಾಟಿಂಗ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಸಿಕ್ಸ್, 5 ಬೌಂಡರಿ ಕಲೆ ಹಾಕಿ, 74 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ 33 ಎಸೆತಗಳಲ್ಲಿ 39 ರನ್, ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 38 ರನ್, ಇಶಾನ್ ಕಿಶನ್ 17 ಎಸೆತಗಳಲ್ಲಿ 27 ರನ್ ಬಾರಿಸಿದರು. ಇನ್ನೂ ಬೌಲಿಂಗ್ ಮಾಡಿದ ಶಿವಾಂಗ್ ಕುಮಾರ್ 3 ವಿಕೆಟ್ ಕಿತ್ತರು.
ನಾಲ್ಕು ಪಂದ್ಯಗಳ ಪೈಕಿ ಆಡಿದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ 2ನೇ ಸ್ಥಾನಕ್ಕೇರಿದೆ. ಸನ್‌ರೈಸರ್ಸ್ ಹೈದರಾಬಾದ್ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತು ಖಾತೆ ತೆರೆದು ಸುಮ್ಮನಾಗಿದೆ.
ಇದನ್ನೂ ಓದಿ : ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪೋಷಕರು!


















