ಬೆಂಗಳೂರು : ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿ ನಾಡಕಛೇರಿಯ ಉಪ ತಹಶೀಲ್ದಾರ್ ಎನ್.ದೀಪಕ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಉಪ ತಹಶೀಲ್ದಾರ್ ಎನ್.ದೀಪಕ್ ಅವರ ಕಾರ್ಯವೈಖರಿ ಮತ್ತು ಕರ್ತವ್ಯ ಲೋಪದ ವಿರುದ್ಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಹಾಗೂ ಇತರ ಸಂಘಟನೆಗಳು ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ದೂರುಗಳನ್ನು ಸಲ್ಲಿಸಿದ್ದವು. ಈ ಹಿನ್ನೆಲೆ ಸಲ್ಲಿಕೆಯಾಗಿರುವ ದೂರುಗಳ ಗಂಭೀರವಾಗಿ ಪರಿಗಣಿಸಿದ ಪ್ರಾದೇಶಿಕ ಆಯುಕ್ತರು, ಮಾರ್ಚ್ 11ರಂದು ದೀಪಕ್ ಅವರಿಗೆ ‘ಕಾರಣ ಕೇಳಿ ನೋಟೀಸ್’ (Show Cause Notice) ಜಾರಿಗೊಳಿಸಿದ್ದರು. ಈ ನೋಟೀಸ್‌ಗೆ ಉತ್ತರಿಸಿರುವ ಅಧಿಕಾರಿ ದೀಪಕ್, ಮಾರ್ಚ್ 20ರಂದು ತಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿದ್ದರು.
ಕ್ರಮಕ್ಕೆ ಆಗ್ರಹಿಸಿದ್ದ ರಾಷ್ಟ್ರೀಯ ಅಂಬೇಡ್ಕರ್ ಸೇನೆ :
ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯಲ್ಲಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಾಗ ಕಬಳಿಕೆ ಆಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ರಾಜ್ಯಾದ್ಯಕ್ಷ ಎಸ್. ಕೆಂಚಯ್ಯ ನೇತೃತ್ವದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಕಚೇರಿ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಬೇಗೂರು ಹೋಬಳಿಯಲ್ಲಿ ಗೋಮಾಳ, ಗುಂಡು ತೋಪು, ಕೆರೆಹೊತ್ತುವರಿ ಸೇರಿದಂತೆ ಮುಂತಾದ ಸರ್ಕಾರಿ ಜಾಗಗಳನ್ನ ಉಪ ತಹಶೀಲ್ದಾರ್ ದೀಪಕ್ ನಾರಾಯಣ್, ಆರ್‌ಐ ಕಿರಣ್ ಕುಮಾರ್ , ವಿಎ ಮಂಜುನಾಥ್ ಸೇರಿ ನಕಲಿ ದಾಖಲಾತಿಗಳನ್ನ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಹೋರಾಟಗಾರರು ಮನವಿ ಪತ್ರ ಸಲ್ಲಿಸಿದ್ದರು.

ಈ ಬೆನ್ನೆಲ್ಲೇ ಎಚ್ಚೆತ್ತ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರು, ಬೇಗೂರು ಹೋಬಳಿ ನಾಡಕಛೇರಿಯ ಉಪ ತಹಶೀಲ್ದಾರ್ ಎನ್.ದೀಪಕ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: BPLಗೆ ಯಾರು ಅರ್ಹರಲ್ಲ ಅವರು APLಗೆ ಹೋಗ್ತಾರೆ : ಮುನಿಯಪ್ಪ ಸ್ಪಷ್ಟನೆ



















