ಟೆಹ್ರಾನ್: ಹೊರ್ಮುಜ್ ಜಲಸಂಧಿ ತೆರೆಯಲು ಹಾಗೂ ಯುದ್ಧ ನಿಲ್ಲಿಸುವ ಒಪ್ಪಂದಕ್ಕೆ ಬರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ 48 ಗಂಟೆಗಳ ಗಡುವು ಮತ್ತು ಬೆದರಿಕೆಗೆ ಕ್ಯಾರೇ ಎನ್ನದ ಇರಾನ್, ಟ್ರಂಪ್ ಅವರ ನಡೆ “ಅಸಹಾಯಕ ಹಾಗೂ ಮೂರ್ಖತನದಿಂದ ಕೂಡಿದೆ” ಎಂದು ಬಣ್ಣಿಸಿದೆ. ಅಲ್ಲದೆ ಅಮೆರಿಕದ ಯಾವುದೇ ದಾಳಿಗೆ “ನರಕದ ಬಾಗಿಲುಗಳು ತೆರೆಯಲಿವೆ” ಎಂದು ಪ್ರತಿ-ಎಚ್ಚರಿಕೆ ನೀಡಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ.
ಏನಿದು ಟ್ರಂಪ್ ಗಡುವು?
ಶನಿವಾರ ರಾತ್ರಿ ತಮ್ಮ ‘ಟ್ರುಥ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿದ್ದ ಅಧ್ಯಕ್ಷ ಟ್ರಂಪ್, ಏಪ್ರಿಲ್ 6ರ ರಾತ್ರಿ 8 ಗಂಟೆಯೊಳಗೆ ಇರಾನ್ ಶಾಂತಿ ಒಪ್ಪಂದಕ್ಕೆ ಬರಬೇಕು ಅಥವಾ ಅಂತರಾಷ್ಟ್ರೀಯ ತೈಲ ಸಂಚಾರ ಮಾರ್ಗ ‘ಹೊರ್ಮುಜ್ ಜಲಸಂಧಿ’ಯನ್ನು ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್ ಮೇಲೆ ಹಿಂದೆಂದೂ ಕಾಣದ ರೀತಿಯ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನು ಇರಾನ್‌ನ ‘ಖಾತಮ್ ಅಲ್-ಅನ್ಬಿಯಾ’ ಕೇಂದ್ರ ಕಚೇರಿಯ ಜನರಲ್ ಅಲಿ ಅಬ್ದುಲ್ಲಾಹಿ ಅವರು ತೀವ್ರವಾಗಿ ಖಂಡಿಸಿದ್ದು, ಟ್ರಂಪ್ ಅವರದ್ದು ಅಸಮತೋಲಿತ ಮತ್ತು ಹತಾಶೆಯ ನಡೆ ಎಂದು ಹೇಳಿದ್ದಾರೆ.
ಅಮೆರಿಕದ ದಾಳಿಗೆ ಪ್ರತಿದಾಳಿಯ ಸಿದ್ಧತೆ
ಅಮೆರಿಕ ಅಥವಾ ಇಸ್ರೇಲ್ ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ಇಸ್ರೇಲ್‌ನ ಆಸ್ತಿಗಳ ಮೇಲೆ “ನಿರಂತರ ಮತ್ತು ವಿನಾಶಕಾರಿ” ದಾಳಿ ನಡೆಸಲಾಗುವುದು ಎಂದು ಇರಾನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದು ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಮತ್ತು ನಮ್ಮ ಹತ್ತಿರ ಅಮೆರಿಕಕ್ಕೆ ನೀಡಲು ಒಂದು “ದೊಡ್ಡ ಆಶ್ಚರ್ಯ” (Big Surprise) ಕಾದಿದೆ ಎಂದು ಇರಾನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧದಲ್ಲಿ ಶತ್ರುಗಳನ್ನು ಹೇಗೆ ಸೋಲಿಸಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪರಮಾಣು ಸ್ಥಾವರಕ್ಕೂ ಅಪ್ಪಳಿಸಿದ ಕ್ಷಿಪಣಿ
ಶನಿವಾರ ನಡೆದ ದಾಳಿಗಳಲ್ಲಿ ಇರಾನ್‌ನ ‘ಬುಶೆಹರ್’ ಪರಮಾಣು ಸ್ಥಾವರದ ಸಮೀಪಕ್ಕೂ ಕ್ಷಿಪಣಿಗಳು ಅಪ್ಪಳಿಸಿವೆ. ಇದರಿಂದಾಗಿ ಅಲ್ಲಿನ ಸುಮಾರು 198 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಬಗ್ಗೆ ಪ್ರತಿಕ್ರಿಯಿಸಿ, ಪರಮಾಣು ಸ್ಥಾವರದ ಮೇಲೆ ದಾಳಿ ಮುಂದುವರಿದರೆ ವಿಕಿರಣ ಸೋರಿಕೆಯಾಗುವ ಸಾಧ್ಯತೆಯಿದೆ. ಇದು ಕೇವಲ ಟೆಹ್ರಾನ್ ಮಾತ್ರವಲ್ಲದೆ, ಕುವೈತ್, ಬಹ್ರೇನ್ ಮತ್ತು ಕತಾರ್‌ನಂತಹ ನೆರೆಹೊರೆಯ ದೇಶಗಳ ರಾಜಧಾನಿಗಳ ಮೇಲೂ ಭೀಕರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಕಳೆದ ಆರು ವಾರಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಈವರೆಗೆ ಇರಾನ್‌ನಲ್ಲಿ ಸುಮಾರು 3,500 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಇದನ್ನೂ ಓದಿ : ಸೌದಿಯಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿ ವಿವರ ಬಹಿರಂಗ : ಸಿಐಎ ವಿಭಾಗವೇ ಧ್ವಂಸ!



















