ಹಜಾರಿಬಾಗ್ : ಮಗನ ಅನಾರೋಗ್ಯ ವಾಸಿಯಾಗಲೆಂದು ಹೆತ್ತ ತಾಯಿಯೇ ತನ್ನ 12 ವರ್ಷದ ಮಗಳನ್ನು ಬಲಿ ಕೊಟ್ಟಿರುವ ಅಮಾನವೀಯ ಮತ್ತು ಆಘಾತಕಾರಿ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಾಟಗಾತಿಯೊಬ್ಬಳ ಕುಮ್ಮಕ್ಕಿನಿಂದಾಗಿ ಈ ಕೃತ್ಯ ನಡೆದಿದ್ದು, ಮಗಳನ್ನು ಬಲಿ ಕೊಟ್ಟರೆ ಮಗ ಗುಣಮುಖನಾಗುತ್ತಾನೆಂಬ ಮೂಢನಂಬಿಕೆಗೆ ಅಮಾಯಕ ಬಾಲಕಿ ಬಲಿಯಾಗಿದ್ದಾಳೆ.
ಆರೋಪಿ ರಶ್ಮಿ ದೇವಿ ಎಂಬಾಕೆ ತನ್ನ ಮಗನ ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಕಂಗಾಲಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆ ಶಾಂತಿ ದೇವಿ ಎಂಬ ಮಾಟಗಾತಿಯನ್ನು ಸಂಪರ್ಕಿಸಿದ್ದಳು. ಬಾಲಕಿಯ ಮೇಲೆ ದೇವಿಯ ಆವಾಹನೆಯಾಗಿದೆ ಎಂದು ನಂಬಿಸಿದ್ದ ಮಾಟಗಾತಿ, ಮಗನ ಆರೋಗ್ಯ ಸುಧಾರಿಸಲು ಮತ್ತು ಕುಟುಂಬದ ಸಮಸ್ಯೆಗಳು ದೂರವಾಗಲು “ಕನ್ಯಾ ಬಲಿ” ನೀಡುವುದು ಅನಿವಾರ್ಯ ಎಂದು ರಶ್ಮಿಗೆ ಸಲಹೆ ನೀಡಿದ್ದಳು. ಅಷ್ಟಮಿ ರಾತ್ರಿಯ ದಿನವೇ ಈ ಬಲಿ ನೀಡಿದರೆ ಹೆಚ್ಚು ಶುಭಪ್ರದ ಎಂದು ನಂಬಿಸಲಾಗಿತ್ತು.
ಪ್ರಿಯಕರನ ಜೊತೆಗೂಡಿ ಮಗಳ ಹತ್ಯೆ
ಮಾಟಗಾತಿಯ ಮಾತಿಗೆ ಮರುಳಾದ ರಶ್ಮಿ ದೇವಿ, ತನ್ನ ಹತ್ತು ವರ್ಷಗಳ ಪರಿಚಯದ ಪ್ರಿಯಕರ ಭೀಮ್ ರಾಮ್ ಎಂಬಾತನ ಸಹಾಯದೊಂದಿಗೆ ಮಾರ್ಚ್ 24ರ ಅಷ್ಟಮಿ ರಾತ್ರಿಯಂದು ತನ್ನದೇ ಮಗಳನ್ನು ಹತ್ಯೆ ಮಾಡಿದ್ದಾಳೆ. ರಶ್ಮಿ ಮಗಳ ಕಾಲುಗಳನ್ನು ಹಿಡಿದುಕೊಂಡರೆ, ಭೀಮ್ ರಾಮ್ ಬಾಲಕಿಯ ಕತ್ತು ಹಿಸುಕಿ ಕೊಂದಿದ್ದಾನೆ. ಮಾಟಗಾತಿಯು ಬಾಲಕಿಯ ಖಾಸಗಿ ಅಂಗದೊಳಗೆ ಕಡ್ಡಿಯೊಂದನ್ನು ತುರುಕಿದ್ದಾಳೆ. ನಂತರ ತಾಂತ್ರಿಕನ ಸೂಚನೆಯಂತೆ ಬೀಮ ರಾವ್ ಬಾಲಕಿಯ ದೇಹದ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ವಿಧಿವಿಧಾನಗಳಿಗಾಗಿ ರಕ್ತವನ್ನು ಸಂಗ್ರಹಿಸಿದ್ದಾರೆ. ಕೃತ್ಯದ ನಂತರ ಬಾಲಕಿಯ ಮೃತದೇಹವನ್ನು ತೋಟವೊಂದರಲ್ಲಿ ಹೂತುಹಾಕಲಾಗಿತ್ತು.
ಹಾದಿ ತಪ್ಪಿಸಲು ಯತ್ನಿಸಿದ ಆರೋಪಿಗಳು
ಮರುದಿನ ಬೆಳಿಗ್ಗೆ ಬಾಲಕಿಯ ಮೃತದೇಹ ಪತ್ತೆಯಾದಾಗ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಆರೋಪಿಗಳು ಇದು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ಸಾಬೀತಾಯಿತು. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಮಾಟಮಂತ್ರದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವುದು ದೃಢಪಟ್ಟಿದೆ.
ಆರೋಪಿಗಳ ಬಂಧನ
ಹಜಾರಿಬಾಗ್ ಎಸ್ಪಿ ಅಂಜನಿ ಅಂಜನ್ ಅವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ತಾಯಿ ರಶ್ಮಿ ದೇವಿ, ಪ್ರಿಯಕರ ಭೀಮ್ ರಾಮ್ ಮತ್ತು ಮಾಟಗಾತಿ ಶಾಂತಿ ದೇವಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ರಶ್ಮಿ ದೇವಿಯ ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದು, ಮನೆಯಿಂದ ದೂರವಿದ್ದರು. ಇನ್ನು ಭೀಮ್ ರಾಮ್ ಈ ಹಿಂದೆಯೂ ತನ್ನ ಅತ್ತಿಗೆ ಸೇರಿದಂತೆ ಇಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸೇರಿ ಇಬ್ಬರು ದುರ್ಮರಣ.. ಪತಿ ಗಂಭೀರ!



















