ಇಂದೋರ್ : ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಮರ್ಡರ್ ಪ್ರಕರಣ ನಿಮಗೆಲ್ಲರಿಗೂ ನೆನಪಿರಬಹುದು. ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದ ವೇಳೆ ತನ್ನ ಪತ್ನಿಯಿಂದಲೇ ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಹತ್ಯೆಗೀಡಾಗಿದ್ದರು.
ಆ ಘಟನೆಯ ಬಳಿಕ ದುಃಖದಲ್ಲೇ ದಿನದೂಡುತ್ತಿದ್ದ ರಾಜಾ ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆಮಾಡಿದೆ. ರಾಜಾ ಮತ್ತೆ ಹುಟ್ಟಿ ಬಂದಿದ್ದಾನೆ ಎಂಬ ನಂಬಿಕೆಯಲ್ಲಿರುವ ಕುಟುಂಬವು, “ರಾಜಾ ಈಸ್ ಬ್ಯಾಕ್” (ರಾಜಾ ಮರಳಿ ಬಂದಿದ್ದಾನೆ) ಎಂಬ ಬಲೂನ್‌ಗಳಿಂದ ಮನೆಯನ್ನು ಅಲಂಕರಿಸಿ ಹೊಸ ಅತಿಥಿಯನ್ನು ಬರಮಾಡಿಕೊಂಡಿದೆ.

ಇದಕ್ಕೆ ಕಾರಣ ರಾಜಾ ರಘುವಂಶಿಯ ಅಣ್ಣ ಸಚಿನ್ ಅವರಿಗೆ ಗಂಡು ಮಗು ಜನಿಸಿದ್ದು. ಈ ಮಗುವೇ ಮೃತ ರಾಜಾ ಎಂದು ಕುಟುಂಬದವರು ಭಾವಿಸಿದ್ದಾರೆ. ಇದಕ್ಕೆ ಕಾರಣ ಅವರಿಬ್ಬರ ಜನ್ಮ ಮತ್ತು ಮರಣದ ನಡುವೆ ಇರುವ ವಿಚಿತ್ರ ಕಾಕತಾಳೀಯ ಸಂಗತಿ. ರಾಜಾ ರಘುವಂಶಿಯನ್ನು ‘ಗ್ಯಾರಸ್’ (ಏಕಾದಶಿ) ದಿನದಂದು ಹತ್ಯೆ ಮಾಡಲಾಗಿತ್ತು. ವಿಶೇಷವೆಂದರೆ, ಈಗ ಜನಿಸಿರುವ ಮಗು ಕೂಡ ಅದೇ ಏಕಾದಶಿಯ ದಿನದಂದೇ ಜನಿಸಿದೆ. “ನನ್ನ ಮಗ ಮತ್ತೆ ಮರಳಿ ಬಂದಿದ್ದಾನೆ” ಎಂದು ರಾಜಾ ಅವರ ತಾಯಿ ಉಮಾ ರಘುವಂಶಿ ಭಾವುಕರಾಗಿ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿಗೆ ‘ರಾಜಾ’ ಎಂದೇ ನಾಮಕರಣ ಮಾಡಲಾಗಿದೆ.

ಹನಿಮೂನ್ ಹೆಸರಲ್ಲಿ ನಡೆದಿದ್ದ ಭೀಕರ ಹತ್ಯೆ
ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿಯಾಗಿದ್ದ ರಾಜಾ ರಘುವಂಶಿ ಕಳೆದ ವರ್ಷ ಮೇ ತಿಂಗಳಲ್ಲಿ ಪತ್ನಿ ಸೋನಂ ರಘುವಂಶಿ ಜೊತೆ ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದರು. ಮೇ 21ರಂದು ಅವರು ಶಿಲ್ಲಾಂಗ್ ತಲುಪಿದ್ದರು. ಆದರೆ ಮೇ 26ರಂದು ದಂಪತಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸುದೀರ್ಘ ಕಾರ್ಯಾಚರಣೆ ನಡೆಸಿದ ನಂತರ, ಜೂನ್ 2ರಂದು ಸೋಹ್ರಾದ ಪ್ರಸಿದ್ಧ ‘ವೈ ಸಾದಾಂಗ್’ ಜಲಪಾತದ ಸಮೀಪವಿರುವ ಆಳವಾದ ಕಂದಕದಲ್ಲಿ ರಾಜಾ ಅವರ ಶವ ಪತ್ತೆಯಾಗಿತ್ತು.
ಪತ್ನಿಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಪೊಲೀಸ್ ತನಿಖೆಯ ವೇಳೆ ಈ ಹತ್ಯೆಯ ಹಿಂದೆ ಪತ್ನಿ ಸೋನಂ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ಸೋನಂಗೆ ರಾಜ್ ಕುಶ್ವಾಹಾ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ರಾಜಾ ಅವರನ್ನು ತೊಡೆದುಹಾಕಲು ಹನಿಮೂನ್ ಪ್ರವಾಸವನ್ನೇ ಸಂಚಾಗಿ ಬಳಸಿಕೊಂಡಿದ್ದಳು. ಸೋನಂ ಮತ್ತು ಅವಳ ಪ್ರಿಯಕರ ಮೂವರು ಸುಪಾರಿ ಹಂತಕರನ್ನು ನೇಮಿಸಿ, ಸೋನಂ ಎದುರೇ ರಾಜಾನನ್ನು ಕೊಲೆ ಮಾಡಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಾರದೊಳಗೆ ಸೋನಂ, ರಾಜ್ ಕುಶ್ವಾಹಾ ಮತ್ತು ಮೂವರು ಹಂತಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದರು.
ಸದ್ಯ ಕೊಲೆಯ ನೋವಿನಿಂದ ನಲುಗಿದ್ದ ಕುಟುಂಬಕ್ಕೆ ಮಗುವಿನ ಜನನ ಹೊಸ ಭರವಸೆ ನೀಡಿದ್ದು, ಸಂಭ್ರಮ ಮನೆಮಾಡಿದೆ. ಕುಟುಂಬ ಸದಸ್ಯರು ಮನೆಯ ಮುಂದೆ ರಾಜಾ ಈಸ್ ಬ್ಯಾಕ್ ಎಂದು ಬಲೂನುಗಳಲ್ಲಿ ಬರೆದು, ಮನೆ ತುಂಬಾ ಸಿಂಗರಿಸಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ‘ಗೃಹಸಚಿವರೇ ನೆಟ್ಟಗಿಲ್ಲ’ ಎಂದವನ ವಿರುದ್ಧ ಸುಮೋಟೋ ಕೇಸ್!



















