ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇದೀಗ ತಮ್ಮ ಪಕ್ಷದ ಅಭ್ಯರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ, ವಿಲ್ಲಿವಾಕ್ಕಂ ಕ್ಷೇತ್ರದ ಅಭ್ಯರ್ಥಿ ಶಬರಿನಾಥನ್ ಅವರ ಹೆಸರನ್ನು ವಿಜಯ್ ಘೋಷಿಸಿದಾಗ, ವೇದಿಕೆಯ ಮೇಲೆ ಕಂಡುಬಂದ ದೃಶ್ಯಗಳು ಈಗ ತಮಿಳುನಾಡಿನಾದ್ಯಂತ ಸಂಚಲನ ಮೂಡಿಸಿವೆ.
ಕಾರ್ಯಕ್ರಮದ ವೇಳೆ ವಿಜಯ್ ಅವರು ಶಬರಿನಾಥನ್ ಹೆಸರನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆಯೇ, ಭಾವುಕರಾದ ಅಭ್ಯರ್ಥಿ ವೇದಿಕೆಯ ಮೇಲೆಯೇ ಕಣ್ಣೀರಿಟ್ಟರು. ಕೂಡಲೇ ಮುಂದಕ್ಕೆ ಬಂದ ನಟ ವಿಜಯ್, ಶಬರಿನಾಥನ್ ಅವರ ಕಣ್ಣೀರು ಒರೆಸಿ ಪ್ರೀತಿಯಿಂದ ಅಪ್ಪಿಕೊಳ್ಳುವ ಮೂಲಕ ಸಾಂತ್ವನ ಹೇಳಿದರು. ಈ ವೇಳೆ ಶಬರಿನಾಥನ್ ಅವರ ತಂದೆ ರಾಜೇಂದ್ರನ್ ಕೂಡ ಭಾವುಕರಾಗಿ ಅಳತೊಡಗಿದರು. ವಿಜಯ್ ಅವರು ತಂದೆ-ಮಗ ಇಬ್ಬರನ್ನೂ ತಬ್ಬಿಕೊಂಡು ಬೆನ್ನುತಟ್ಟುವ ಮೂಲಕ ತಮ್ಮ ನಿಕಟ ಸಂಬಂಧವನ್ನು ಸಾರಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಅವರ ಸರಳತೆಗೆ ಅಭಿಮಾನಿಗಳು ಮಾರುಹೋಗಿದ್ದಾರೆ.

ಮೂರು ದಶಕಗಳ ನಂಬಿಕೆಗೆ ಸಿಕ್ಕ ಪ್ರತಿಫಲ
ಈ ಭಾವನಾತ್ಮಕ ಕ್ಷಣದ ಹಿಂದೆ ದಶಕಗಳ ಇತಿಹಾಸವಿದೆ. ಅಭ್ಯರ್ಥಿ ಶಬರಿನಾಥನ್ ಅವರ ತಂದೆ ರಾಜೇಂದ್ರನ್ ಅವರು ಕಳೆದ 30 ವರ್ಷಗಳಿಂದ ವಿಜಯ್ ಅವರ ಜೊತೆಗಿದ್ದಾರೆ. ಆರಂಭದಲ್ಲಿ ವಿಜಯ್ ಅವರ ಕಾರು ಚಾಲಕರಾಗಿ ವೃತ್ತಿ ಆರಂಭಿಸಿದ್ದ ಅವರು, ಪ್ರಸ್ತುತ ಅವರ ಆಪ್ತ ಸಹಾಯಕರಾಗಿ (PA) ಕೆಲಸ ಮಾಡುತ್ತಿದ್ದಾರೆ. ಚಾಲಕನ ಮಗ ಇಂದು ವಿಜಯ್ ಅವರ ಕಣ್ಮುಂದೆಯೇ ಬೆಳೆದು ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಕಾರ್ಯಕರ್ತರಲ್ಲಿ ನಿಷ್ಠೆಗೆ ಸಿಕ್ಕ ಬೆಲೆ ಎಂಬ ಭಾವನೆ ಮೂಡಿಸಿದೆ. “ಇದು ಕೇವಲ ರಾಜಕೀಯವಲ್ಲ, ಇದು ದಶಕಗಳ ಕಾಲ ಬೆಳೆದುಬಂದ ಪ್ರೀತಿ ಮತ್ತು ವಿಶ್ವಾಸ” ಎಂದು ಪಕ್ಷದ ವಕ್ತಾರ ಫೆಲಿಕ್ಸ್ ಜೆರಾಲ್ಡ್ ಬಣ್ಣಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಸಾಮಾನ್ಯರ ಸಮರ
ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ತಮ್ಮ ಪಕ್ಷದ ಅಭ್ಯರ್ಥಿಗಳನ್ನು “ಸಾಮಾನ್ಯ ಜನರು” ಎಂದು ಸಾರಿದರು. “ಅನುಭವ ಎನ್ನುವ ಹೆಸರಿನಲ್ಲಿ ಹಳೆಯ ರಾಜಕಾರಣಿಗಳು ಲೂಟಿ ಮತ್ತು ಭ್ರಷ್ಟಾಚಾರದಲ್ಲಿ ಮಾತ್ರ ಅನುಭವ ಹೊಂದಿದ್ದಾರೆ” ಎಂದು ಪರೋಕ್ಷವಾಗಿ ಕಿಡಿಕಾರಿದರು. ರಾಜ್ಯದಲ್ಲಿ ಈ ಬಾರಿ ಇರುವುದು ಡಿಎಂಕೆ ಮತ್ತು ಟಿವಿಕೆ ನಡುವೆ ನೇರ ಹಣಾಹಣಿ. ಯುವ ಮತದಾರರು ತಮ್ಮ ಕುಟುಂಬದವರನ್ನು ಮನವೊಲಿಸಿ ಟಿವಿಕೆ ಪಕ್ಷವನ್ನು ಬೆಂಬಲಿಸುವಂತೆ ಮಾಡಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಜಾಮೀನು ಪಡೆದು ಹೊರಬಂದಿದ್ದ ಗೋ ಕಳ್ಳರ ವಿರುದ್ಧ ಕೋಕಾ ಜಾರಿ – ಮತ್ತೆ ಜೈಲು ಪಾಲು!



















