ಮೈಸೂರು : ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಡ್ರಗ್ಸ್ ಜಾಲ ಪತ್ತೆಯಾಗಿದ್ದು, ಹುಣಸೂರು ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಹುಣಸೂರು ತಾಲೂಕಿನ ದಾಸನಪುರ–ರತ್ನಪುರಿ ಮಾರ್ಗ ಮಧ್ಯದ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಮೇಲೆ ದಾಳಿ ನಡೆಸಿದ ಪೊಲೀಸರು, ಭಾರೀ ಪ್ರಮಾಣದ ನಿಷೇಧಿತ ಪದಾರ್ಥವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟದ ಮಾಲೀಕ ಇರ್ಫಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾತನಾಡಿದ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ದಾಸನಪುರ ಗ್ರಾಮದ ತೋಟದ ಮನೆಯಲ್ಲಿ ಒಟ್ಟು ಸುಮಾರು 48 ಕೆಜಿ ಡ್ರಗ್ಸ್ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ. ಒಂದು ದಿನ ತಡವಾಗಿದ್ದರೆ ಈ ಡ್ರಗ್ಸ್ ಕರ್ನಾಟಕ ಮತ್ತು ಕೇರಳದ ಹಲವು ಭಾಗಗಳಿಗೆ ಸಾಗಾಟವಾಗುವ ಸಾಧ್ಯತೆ ಇತ್ತು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಪತ್ತೆಯಾದ ಡ್ರಗ್ಸ್ ‘ಮೆಫೆಡ್ರೋನ್’ ಆಗಿದ್ದು, ಒಂದು ಕೆಜಿಗೆ ಸುಮಾರು 30 ಲಕ್ಷ ರೂ. ಮೌಲ್ಯವಿದೆ ಎಂದು ತಿಳಿದುಬಂದಿದೆ. ಮುಂಬೈ ಸಂಪರ್ಕದಿಂದ ಈ ಡ್ರಗ್ಸ್ ತಯಾರಾಗಿ ಮೈಸೂರಿಗೆ ತಲುಪಿದ್ದು, ಬಳಿಕ ಪ್ಯಾಕೆಟ್‌ಗಳಾಗಿ ವಿತರಣೆ ಮಾಡಲು ಸಿದ್ಧವಾಗಿತ್ತು. ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನಿಂತಿದ್ದ ಕಂಟೈನರ್ಗೆ ಕಾರು ಡಿಕ್ಕಿ : ತಾಯಿ-ಮಗಳು ಸಾವು, ಮೂವರ ಸ್ಥಿತಿ ಗಂಭೀರ



















