ವಾಷಿಂಗ್ಟನ್ : ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಹಾಲಿ ಅಧ್ಯಕ್ಷರೊಬ್ಬರ ಸಹಿ ದೇಶದ ಅಧಿಕೃತ ಕರೆನ್ಸಿ ನೋಟುಗಳ ಮೇಲೆ ಮುದ್ರಣಗೊಳ್ಳಲಿದೆ. ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ (Semiquincentennial) ಸ್ಮರಣಾರ್ಥವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಎಲ್ಲ ಹೊಸ ಕಾಗದದ ನೋಟುಗಳ ಮೇಲೆ ಅಳವಡಿಸುವ ಮಹತ್ವದ ನಿರ್ಧಾರವನ್ನು ಅಮೆರಿಕದ ಹಣಕಾಸು ಇಲಾಖೆ ಕೈಗೊಂಡಿದೆ.
ಈ ಹೊಸ ನಿರ್ಧಾರದ ಮೂಲಕ ಅಮೆರಿಕವು ತನ್ನ 165 ವರ್ಷಗಳ ಸುದೀರ್ಘ ಇತಿಹಾಸವನ್ನು ಬದಲಾಯಿಸಿದಂತಾಗಿದೆ. 1861ರಲ್ಲಿ ಫೆಡರಲ್ ಕರೆನ್ಸಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ, ಅಮೆರಿಕದ ನೋಟುಗಳ ಮೇಲೆ ‘ಯುಎಸ್ ಟ್ರೆಷರರ್’ (US Treasurer) ಅವರ ಸಹಿ ಕಡ್ಡಾಯವಾಗಿರುತ್ತಿತ್ತು. ಆದರೆ ಇದೀಗ, ಆ ಜಾಗದಲ್ಲಿ ಅಧ್ಯಕ್ಷರ ಸಹಿ ಮೂಡಿಬರಲಿದ್ದು, ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಮೊದಲ ಬಾರಿಗೆ ತಿಲಾಂಜಲಿ ನೀಡಲಾಗಿದೆ.

ಜೂನ್‌ನಲ್ಲಿ 100 ಡಾಲರ್‌ನ ಹೊಸ ನೋಟುಗಳ ಮುದ್ರಣ
ಅಮೆರಿಕ ವಿತ್ತ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಹಣಕಾಸು ಸಚಿವ ಸ್ಕಾಟ್ ಬೆಸ್ಸೆಂಟ್ ಅವರ ಸಹಿಯಿರುವ 100 ಡಾಲರ್ ಮುಖಬೆಲೆಯ ನೋಟುಗಳು ಮೊದಲ ಬಾರಿಗೆ ಮುದ್ರಣಗೊಳ್ಳಲಿವೆ. ತದನಂತರದ ತಿಂಗಳುಗಳಲ್ಲಿ ಹಂತ ಹಂತವಾಗಿ ಇತರ ಎಲ್ಲ ಮುಖಬೆಲೆಯ ನೋಟುಗಳ ಮೇಲೂ ಇದೇ ಮಾದರಿಯ ಸಹಿಗಳನ್ನು ಅಳವಡಿಸಿ ಚಲಾವಣೆಗೆ ತರಲಾಗುತ್ತದೆ.
ಈ ಐತಿಹಾಸಿಕ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸ್ಕಾಟ್ ಬೆಸೆಂಟ್, ಇದೊಂದು ಬಲಿಷ್ಠ ಆರ್ಥಿಕ ಪ್ರಗತಿಯ ದ್ಯೋತಕ ಎಂದಿದ್ದಾರೆ. “ನಮ್ಮ ಶ್ರೇಷ್ಠ ರಾಷ್ಟ್ರ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಸಾಧನೆಗಳನ್ನು ಗುರುತಿಸಲು, ಡಾಲರ್ ನೋಟುಗಳ ಮೇಲೆ ಅವರ ಹೆಸರನ್ನು ಮುದ್ರಿಸುವುದಕ್ಕಿಂತ ಪ್ರಬಲವಾದ ಮಾರ್ಗ ಮತ್ತೊಂದಿಲ್ಲ. 250ನೇ ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಈ ನಿರ್ಧಾರ ಅತ್ಯಂತ ಸೂಕ್ತ,” ಎಂದು ತಿಳಿಸಿದ್ದಾರೆ.
ಚಿನ್ನದ ನಾಣ್ಯದಲ್ಲೂ ಟ್ರಂಪ್ ಭಾವಚಿತ್ರ
ಸದ್ಯ ಅಮೆರಿಕದಲ್ಲಿ ಜೋ ಬೈಡನ್ ಆಡಳಿತಾವಧಿಯ ವಿತ್ತ ಸಚಿವ ಜಾನೆಟ್ ಯೆಲೆನ್ ಹಾಗೂ ಯುಎಸ್ ಟ್ರೆಷರರ್ ಲಿನ್ ಮಲೆರ್ಬಾ ಅವರ ಸಹಿಯಿರುವ ನೋಟುಗಳ ಮುದ್ರಣ ಕಾರ್ಯ ಇನ್ನೂ ಮುಂದುವರಿದಿದೆ. ಮಲೆರ್ಬಾ ಅವರ ಸಹಿಯು 1861ರಿಂದ ನಿರಂತರವಾಗಿ ನಡೆದುಬಂದಿದ್ದ ಟ್ರೆಷರರ್ ಸಹಿಯ ಪರಂಪರೆಯ ಅಂತಿಮ ಕೊಂಡಿಯಾಗಲಿದೆ. ಇದರ ಜೊತೆಗೆ, ಅಮೆರಿಕದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವಿರುವ 24 ಕ್ಯಾರೆಟ್ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡಲು ಫೆಡರಲ್ ಆರ್ಟ್ಸ್ ಕಮಿಷನ್ ಇತ್ತೀಚೆಗಷ್ಟೇ ಒಪ್ಪಿಗೆ ಸೂಚಿಸಿದ್ದು, ಟ್ರಂಪ್ ಅವರಿಗೆ ಮತ್ತೊಂದು ವಿಶೇಷ ಗೌರವ ಸಂದಂತಾಗಿದೆ.
ಇದನ್ನೂ ಓದಿ : ಪಂಜಾಬ್ ಕಿಂಗ್ಸ್ ತಂಡ ಹೇಗಿದೆ? 19ನೇ ಪ್ರಯತ್ನದಲ್ಲಿ ಒಲಿಯುವುದೇ ಅದೃಷ್ಟ



















