ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿರುವ ಇರಾನ್, ಇದೀಗ ಮತ್ತೊಂದು ಆಯಕಟ್ಟಿನ ಮಾರ್ಗವಾದ ‘ಬಾಬ್ ಅಲ್-ಮಂದೇಬ್‘ ಜಲಸಂಧಿಯನ್ನೂ ಮುಚ್ಚುವುದಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದೆ. ಇರಾನ್‌ನ ಈ ನಡೆ ಜಾಗತಿಕ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತೈಲ ಮಾರ್ಗಕ್ಕೆ ಇರಾನ್ ಅಡ್ಡಿ?
ಒಂದು ವೇಳೆ ಅಮೆರಿಕ ಅಥವಾ ಇಸ್ರೇಲ್ ಪಡೆಗಳು ಇರಾನ್‌ನ ದ್ವೀಪಗಳ ಮೇಲೆ ದಾಳಿ ನಡೆಸಲು ಮುಂದಾದರೆ, ಸೂಯೆಜ್ ಕಾಲುವೆಗೆ ಸಂಪರ್ಕ ಕಲ್ಪಿಸುವ ಬಾಬ್ ಅಲ್-ಮಂದೇಬ್ ಜಲಸಂಧಿಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗುವುದು ಎಂದು ಇರಾನ್‌ನ ಐಆರ್‌ಜಿಸಿ ಮೂಲಗಳು ತಿಳಿಸಿವೆ. ವಿಶ್ವದ ಒಟ್ಟು ಸಮುದ್ರಯಾನದ ತೈಲ ಸಾಗಣೆಯಲ್ಲಿ ಸುಮಾರು ಶೇ.12ರಷ್ಟು ಭಾಗ ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಮಾರ್ಗವು ವಿಶ್ವದ ನಾಲ್ಕನೇ ಅತಿದೊಡ್ಡ ಹಡಗು ಸಾರಿಗೆ ರಸ್ತೆಯಾಗಿದೆ. ಶತ್ರುಪಡೆಗಳು ಇರಾನ್ ನೆಲದ ಮೇಲೆ ಕಣ್ಣಿಟ್ಟರೆ ಅವರಿಗೆ ಅಚ್ಚರಿಯ ರೂಪದಲ್ಲಿ ಬೇರೆ ರಂಗಗಳಲ್ಲಿ ತಿರುಗೇಟು ನೀಡಲು ಸಿದ್ಧವಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಕಣಕ್ಕಿಳಿಯಲಿವೆ ಹೌತಿ ಬಂಡುಕೋರರ ಪಡೆ
ಇರಾನ್ ತನ್ನ ಈ ಗುರಿಯನ್ನು ಸಾಧಿಸಲು ಯೆಮೆನ್ ಮೂಲದ ಹೌತಿ ಬಂಡುಕೋರರ ಬೆಂಬಲ ಪಡೆಯುವ ಸಾಧ್ಯತೆಯಿದೆ. ಟೆಹ್ರಾನ್ ಬೆಂಬಲಿತ ಹೌತಿಗಳು ಈಗಾಗಲೇ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿ ಸಂಚಲನ ಮೂಡಿಸಿದ್ದು, ಇದೀಗ ಬಾಬ್ ಅಲ್-ಮಂದೇಬ್ ಜಲಸಂಧಿಯನ್ನು ನಿಯಂತ್ರಿಸಲು ಇರಾನ್ ಜೊತೆ ಕೈಜೋಡಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳನ್ನು ಹಿಮ್ಮೆಟ್ಟಿಸಲು ಈ ಜಲಸಂಧಿಯ ಮೇಲೆ ಹತೋಟಿ ಸಾಧಿಸುವುದು ಅಗತ್ಯ ಎಂದು ಇರಾನ್‌ನ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದು, ಅನ್ಸಾರುಲ್ಲಾ (ಹೌತಿ) ಸಂಘಟನೆಯು ಈ ಕಾರ್ಯಾಚರಣೆಗೆ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ತಿಳಿಸಿವೆ.
ದ್ವೀಪಗಳ ವಶಪಡಿಸಿಕೊಳ್ಳುವ ಭೀತಿ
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಈ ಕುರಿತು ಎಕ್ಸ್ (ಟ್ವಿಟ್ಟರ್) ನಲ್ಲಿ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇರಾನ್‌ನ ‘ಖಾರ್ಗ್’ ನಂತಹ ಪ್ರಮುಖ ದ್ವೀಪಗಳನ್ನು ವಶಪಡಿಸಿಕೊಳ್ಳಲು ಶತ್ರುಪಡೆಗಳು ಸಂಚು ರೂಪಿಸುತ್ತಿವೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಅಂತಹ ಯಾವುದೇ ಸಾಹಸಕ್ಕೆ ಶತ್ರುಗಳು ಕೈ ಹಾಕಿದರೆ, ಅವರಿಗೆ ಬೆಂಬಲ ನೀಡುವ ಪ್ರಾದೇಶಿಕ ರಾಷ್ಟ್ರಗಳ ಪ್ರಮುಖ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಸಮುದ್ರದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಗದಗದಲ್ಲೂ ಸಿಲಿಂಡರ್‌ಗಾಗಿ ಹಾಹಾಕಾರ – ಊಟ, ನಿದ್ದೆ ಬಿಟ್ಟು ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನ!



















