ಬೆಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಕಾಮಗಾರಿಗಳ ಮೇಲೂ ತೀವ್ರವಾಗಿ ಹೊಡೆತ ಬಿದ್ದಿದೆ. ವಿಶೇಷವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗಳು ಬಿಟುಮೆನ್ ಕೊರತೆಯಿಂದಾಗಿ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಹಾಳಾಗಿರುವ ರಸ್ತೆಗಳಿಗೆ ಹೊಸ ಡಾಂಬರು (ಬಿಟುಮೆನ್) ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಅನೇಕ ಕಡೆಗಳಲ್ಲಿ ಕೆಲಸಗಳು ನಿಂತಿವೆ.
ಬಿಟುಮೆನ್, ಕಚ್ಚಾ ತೈಲ ಸಂಸ್ಕರಣೆಯ ಉಪ ಉತ್ಪನ್ನವಾಗಿದ್ದು, ಅಸ್ಫಾಲ್ಟ್ ಮಿಶ್ರಣಗಳಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದರ ಪೂರೈಕೆ ನಡೆಯುತ್ತಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೂರೈಕೆ ಸರಪಳಿ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಮಂಗಳೂರು ರಿಫೈನರೀಸ್ ಮತ್ತು ಮದ್ರಾಸ್ ರಿಫೈನರೀಸ್ ಮೂಲಕ ಬೆಂಗಳೂರಿನ ಗುತ್ತಿಗೆದಾರರು ಬಿಟುಮೆನ್ ಆಮದು ಮಾಡಿಕೊಳ್ಳುತ್ತಿದ್ದರು. ಈಗ ಈ ಪೂರೈಕೆ ಕುಂಠಿತಗೊಂಡಿದ್ದು, ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಿಂದೆ ಒಂದು ಟನ್ ಬಿಟುಮೆನ್‌ಗೆ ಸುಮಾರು 45,000 ಇದ್ದ ದರ, ಈಗ 60,000ಕ್ಕೆ ಏರಿಕೆಯಾಗಿದೆ. ಇದರಿಂದ ಗುತ್ತಿಗೆದಾರರ ವೆಚ್ಚ ಹೆಚ್ಚಾಗಿದ ಪರಿಣಾಮವಾಗಿ, ಅನೇಕರು ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ಏಳು ದಿನಗಳಲ್ಲಿ ಶೇ.80ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದೇ ವೇಳೆ ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏಪ್ರಿಲ್ ಅಂತ್ಯದೊಳಗೆ ಗಡುವು ನೀಡಿದ್ದರು, ಇತ್ತೀಚಿನ ಬಿಟುಮೆನ್ ಬಿಕ್ಕಟ್ಟಿನಿಂದ ಆ ಗಡುವು ಸಾಧಿಸುವುದು ಕಷ್ಟಸಾಧ್ಯವಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಮೂವರು ಆಟಗಾರರು ‘ಹೊರೆ’ಯಾಗಲಿದ್ದಾರೆಯೇ?



















