ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ಆವೃತ್ತಿಯ ರಣಕಹಳೆ ಮೊಳಗಲು ದಿನಗಣನೆ ಆರಂಭವಾಗಿದೆ. ಮಾರ್ಚ್ 29 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲು KKR (ಕೋಲ್ಕತ್ತಾ ನೈಟ್ ರೈಡರ್ಸ್) ತಂಡ ಸಕಲ ಸಿದ್ಧತೆ ನಡೆಸುತ್ತಿದೆ. ಟೂರ್ನಿಗೂ ಮುನ್ನವೇ ಕೆಕೆಆರ್ ತಂಡದ ಮ್ಯಾನೇಜ್ಮೆಂಟ್‌ಗೆ ಹಾಗೂ ನಾಯಕತ್ವಕ್ಕೆ ಒಂದು ಸಿಹಿ ತಲೆನೋವು ಶುರುವಾಗಿದೆ.
ಹೌದು.. ತಂಡದಲ್ಲಿ ಬಲಿಷ್ಠ ಬ್ಯಾಟರ್‌ಗಳ ಪಡೆಯೇ ಇದ್ದು, ಅಂತಿಮವಾಗಿ ಪ್ಲೇಯಿಂಗ್-11 ನಲ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ಹೇಗೆ ಹೊಂದಿಸುವುದು ಎಂಬುದೇ ಈಗ ಫ್ರಾಂಚೈಸಿ ಮುಂದಿರುವ ಅತಿ ದೊಡ್ಡ ಸವಾಲಾಗಿದೆ ಎಂದು ತಂಡದ ಸಹಾಯಕ ತರಬೇತುದಾರ ಶೇನ್ ವಾಟ್ಸನ್ ಬಹಿರಂಗಪಡಿಸಿದ್ದಾರೆ.
ಯಾರಿಗೆ ಸಿಗಲಿದೆ ಅವಕಾಶ?
ಶುಕ್ರವಾರ ಈಡನ್ ಗಾರ್ಡನ್ಸ್‌ನಲ್ಲಿ ಜಿಯೋಸ್ಟಾರ್ ಆಯೋಜಿಸಿದ್ದ ಪಂದ್ಯಾವಳಿ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಟ್ಸನ್, ತಂಡದ ಸಂಯೋಜನೆಯ ಕುರಿತು ಮುಕ್ತವಾಗಿ ಹಂಚಿಕೊಂಡರು. ಕೆಕೆಆರ್ ತಂಡವು ಈ ಬಾರಿ ವಿಶ್ವದರ್ಜೆಯ ಬ್ಯಾಟರ್‌ಗಳನ್ನು ಹೊಂದಿದ್ದು, ವಿಶೇಷವಾಗಿ ಆರಂಭಿಕ ಆಟಗಾರರ ಪಟ್ಟಿ ದೊಡ್ಡದಿದೆ. ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ ಅವರಂತಹ ಸ್ಪೆಷಲಿಸ್ಟ್ ಓಪನರ್‌ಗಳ ಜೊತೆಗೆ, ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿರುವ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ ಕೂಡ ರೇಸ್‌ನಲ್ಲಿದ್ದಾರೆ. ನ್ಯೂಜಿಲೆಂಡ್‌ನ ಯುವ ತಾರೆ ರಚಿನ್ ರವೀಂದ್ರ ಕೂಡ ಅಗ್ರ ಕ್ರಮಾಂಕದಲ್ಲಿ ಆಡಬಲ್ಲ ಸಮರ್ಥರು. ಇಷ್ಟೆಲ್ಲಾ ಆಯ್ಕೆಗಳಿರುವಾಗ ಯಾರನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು ಎಂಬುದನ್ನು ನಿರ್ಧರಿಸುವುದು ಸುಲಭದ ಮಾತಲ್ಲ.
ಕ್ಯಾಮರೂನ್ ಗ್ರೀನ್ ಪಾತ್ರವೇನು?
ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡವು ಬರೋಬ್ಬರಿ 25.20 ಕೋಟಿ ರೂಪಾಯಿಗಳ ದಾಖಲೆ ಮೊತ್ತ ನೀಡಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಖರೀದಿಸಿದೆ. ಗ್ರೀನ್ ಕೂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಇಷ್ಟಪಡುವ ಆಟಗಾರ. ಹೀಗಾಗಿ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಬಗ್ಗೆ ಕುತೂಹಲ ಮೂಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಶೇನ್ ವಾಟ್ಸನ್, “ನಮ್ಮ ತಂಡದಲ್ಲಿರುವ ಪ್ರತಿಭಾವಂತ ಆಟಗಾರರ ದಂಡು ನೋಡಿದರೆ ನಮಗೇ ಆಶ್ಚರ್ಯವಾಗುತ್ತದೆ. ಇವರನ್ನೆಲ್ಲಾ ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದನ್ನು ನಿರ್ಧರಿಸುವುದೇ ನಮ್ಮ ಮುಂದಿರುವ ಅಂತಿಮ ಸವಾಲು. ಮೊದಲ ಪಂದ್ಯದಿಂದಲೇ ಸರಿಯಾದ ಕಾಂಬಿನೇಷನ್ ಕಂಡುಕೊಳ್ಳುವುದು ಬಹಳ ಮುಖ್ಯ. ಇನ್ನು ಕ್ಯಾಮರೂನ್ ಗ್ರೀನ್ ಓರ್ವ ಅದ್ಭುತ ಆಲ್‌ರೌಂಡರ್. ಅವರಿಗೆ ಎಲ್ಲಿಯೇ ಅವಕಾಶ ನೀಡಿದರೂ ಅವರು ತಮ್ಮ ಶಕ್ತಿಮೀರಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಮ ಕ್ರಮಾಂಕದ ಬಲ ಹಾಗೂ ಪಿಚ್ ಸವಾಲು
ಅಗ್ರ ಕ್ರಮಾಂಕ ಮಾತ್ರವಲ್ಲದೆ, ಮಧ್ಯಮ ಕ್ರಮಾಂಕದಲ್ಲೂ ಕೆಕೆಆರ್ ಬಲಿಷ್ಠವಾಗಿದೆ. ರಿಂಕು ಸಿಂಗ್, ರಮಣ್‌ದೀಪ್ ಸಿಂಗ್ ಮತ್ತು ಅಂಗ್‌ಕ್ರಿಶ್ ರಘುವಂಶಿಯಂತಹ ದೇಶೀಯ ಪ್ರತಿಭೆಗಳು ತಂಡಕ್ಕೆ ಆಧಾರವಾಗಿದ್ದಾರೆ. ಅನುಭವ ಹಾಗೂ ಯುವಕೌಶಲ್ಯದ ಅದ್ಭುತ ಸಂಯೋಜನೆ ಈ ಬಾರಿಯ ಕೆಕೆಆರ್ ತಂಡದಲ್ಲಿದೆ ಎಂದು ವಾಟ್ಸನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಈಡನ್ ಗಾರ್ಡನ್ಸ್ ಪಿಚ್ ಸ್ವರೂಪದಿಂದಾಗಿ ಕೆಕೆಆರ್ ತವರಿನ ಪಂದ್ಯಗಳಲ್ಲಿ ಪರದಾಡಿತ್ತು. ತಂಡದ ಬ್ಯಾಟಿಂಗ್ ವಿಭಾಗವು ಹೆಚ್ಚಾಗಿ ವಿದೇಶಿ ಆಟಗಾರರನ್ನು ಅವಲಂಬಿಸಿರುವುದರಿಂದ, ಈ ಬಾರಿ ತವರಿನ ಪಿಚ್‌ಗಳ ಸಿದ್ಧತೆಯಲ್ಲಿ ಫ್ರಾಂಚೈಸಿ ಹೆಚ್ಚು ರಣತಂತ್ರ ರೂಪಿಸಬೇಕಿದೆ. ಮಾರ್ಚ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧದ ಹೋರಾಟದ ಬಳಿಕ, ಕೆಕೆಆರ್ ತವರಿಗೆ ಮರಳಲಿದ್ದು ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸತತ ಮೂರು ತವರಿನ ಪಂದ್ಯಗಳನ್ನು ಆಡಲಿದೆ. ಒಟ್ಟಿನಲ್ಲಿ, ಸೂಕ್ತ ಬ್ಯಾಟಿಂಗ್ ಕ್ರಮಾಂಕವನ್ನು ಕಂಡುಕೊಂಡು ತಂಡವನ್ನು ಗೆಲುವಿನ ಹಳಿಗೆ ತರುವುದು ಕೋಚ್ ಶೇನ್ ವಾಟ್ಸನ್ ಮತ್ತು ನಾಯಕನ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ.
ಇದನ್ನೂ ಓದಿ : ರಂಜಾನ್ ಹಬ್ಬದಂದೇ ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ!



















