ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯವೈಖರಿಯಲ್ಲಿ ಶೀಘ್ರದಲ್ಲೇ ಮಹತ್ತರ ಬದಲಾವಣೆಯಾಗುವ ನಿರೀಕ್ಷೆಯಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳ ಪಟ್ಟಿ ಮತ್ತು ಪೀಠಗಳ ಹಂಚಿಕೆ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಾಂಶಕ್ಕೆ ವಹಿಸಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವನ್ನು ಹಾಗೂ ಆಡಳಿತಾತ್ಮಕ ಲೋಪಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಸಿಜೆಐ ಸೂರ್ಯಕಾಂತ್ ಅವರ ಐತಿಹಾಸಿಕ ನಿರ್ಧಾರ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರಸ್ತುತ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳನ್ನು ವಿವಿಧ ಪೀಠಗಳಿಗೆ ನಿಯೋಜಿಸುವ ಸಂಪೂರ್ಣ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳ ಬಳಿ ಇರುತ್ತದೆ. ಈ ಕಾರಣಕ್ಕಾಗಿಯೇ ಅವರನ್ನು ‘ಮಾಸ್ಟರ್ ಆಫ್ ದಿ ರೋಸ್ಟರ್’ ಎಂದು ಕರೆಯಲಾಗುತ್ತದೆ. ಆದರೆ, ಈ ಅಧಿಕಾರವು ಅನೇಕ ಬಾರಿ ವಿಮರ್ಶೆ ಹಾಗೂ ಪರಿಶೀಲನೆಗೆ ಒಳಪಟ್ಟಿತ್ತು. ಇದೀಗ ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ‘ಎಐ ಶೃಂಗಸಭೆ’ ಬೆನ್ನಲ್ಲೇ, ಪ್ರಕರಣಗಳ ಹಂಚಿಕೆಯನ್ನು ಪಾರದರ್ಶಕಗೊಳಿಸಲು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಿಜೆಐ ಮುಂದಾಗಿದ್ದಾರೆ.
ಬದಲಾವಣೆಗೆ ನಾಂದಿ ಹಾಡಿದ ಆ ಒಂದು ಪ್ರಕರಣ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದ ಒಂದು ಪ್ರಕರಣವು ಈ ದೊಡ್ಡ ಬದಲಾವಣೆಗೆ ಮೂಲ ಕಾರಣ ಎನ್ನಲಾಗಿದೆ. 1986ರ ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್ಸ್ ಮತ್ತು ಸಮಾಜಘಾತುಕ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಪ್ರಶ್ನಿಸಿ ಇರ್ಫಾನ್ ಸೋಲಂಕಿ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ, ಇದೇ ರೀತಿಯ ಮತ್ತೊಂದು ಅರ್ಜಿಯನ್ನು (ಮೊಹಮ್ಮದ್ ಅನಸ್ ಚೌಧರಿ ವಿರುದ್ಧ ಉತ್ತರಪ್ರದೇಶ ಸರ್ಕಾರ) 2022ರ ಡಿಸೆಂಬರ್ 12ರಂದೇ ಅಂದಿನ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ವಜಾಗೊಳಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತು.
ಈಗಾಗಲೇ ವಜಾಗೊಂಡಿದ್ದರೂ ಅದೇ ರೀತಿಯ ಅರ್ಜಿ ಮತ್ತೆ ಹೊಸ ಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗಿದ್ದನ್ನು ಕಂಡು ಸಿಜೆಐ ಸೂರ್ಯಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ವಕೀಲ ಶೋಯೆಬ್ ಆಲಂ ಅರ್ಜಿಯನ್ನು ಹಿಂಪಡೆಯಲು ಮುಂದಾದರೂ, ನ್ಯಾಯಾಲಯ ಅದಕ್ಕೆ ಅವಕಾಶ ನೀಡದೆ ಪ್ರಕರಣವು ತಾರ್ಕಿಕ ಅಂತ್ಯ ಕಾಣುವವರೆಗೆ ಅದನ್ನು ಬಾಕಿ ಉಳಿಸಿಕೊಳ್ಳಲು ಸೂಚಿಸಿತು. ಜೊತೆಗೆ ಈ ಗಂಭೀರ ಆಡಳಿತಾತ್ಮಕ ಲೋಪದ ಕುರಿತು ಆಳವಾದ ತನಿಖೆಗೆ ಸಿಜೆಐ ಆದೇಶಿಸಿದರು.
ರಿಜಿಸ್ಟ್ರಿಯಲ್ಲಿ ಮೇಜರ್ ಸರ್ಜರಿ
ತನಿಖೆಯ ವೇಳೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಎರಡು ಪ್ರಮುಖ ವ್ಯವಸ್ಥಿತ ವೈಫಲ್ಯಗಳು ಪತ್ತೆಯಾಗಿವೆ. ಅಧಿಕಾರಿಗಳು ದೀರ್ಘಕಾಲದವರೆಗೆ ಒಂದೇ ಹುದ್ದೆಯಲ್ಲಿ ಮುಂದುವರಿದಿರುವುದು ಮತ್ತು ಹಳೆಯ ತಾಂತ್ರಿಕ ಮೂಲಸೌಕರ್ಯಗಳಿಂದಾಗಿ ಪ್ರಕರಣಗಳ ಹಂಚಿಕೆಯಲ್ಲಿ ಅನಿಯಮಿತ ಹಾಗೂ ಅನುಚಿತ ಲೋಪಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ದೀರ್ಘಕಾಲೀನ ಸಮಸ್ಯೆಯನ್ನು ಸರಿಪಡಿಸಲು ರಿಜಿಸ್ಟ್ರಿಯೊಳಗೆ ಹಿಂದೆಂದೂ ಕಾಣದ ರೀತಿಯಲ್ಲಿ ಅಧಿಕಾರಿಗಳ ಬೃಹತ್ ಅಂತರ್-ಇಲಾಖಾ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಎರಡನೇ ಹಂತದ ವರ್ಗಾವಣೆ ನಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ : ಇರಾನ್‌ನ ಹಾರ್ಮುಜ್ ಜಲಸಂಧಿಯಲ್ಲಿದೆ ನಿಸರ್ಗದ ವಿಸ್ಮಯ: ಇಲ್ಲಿದೆ ಕೆಂಪು ಕಡಲತೀರ, ಮರಳನ್ನು ತಿನ್ನಲೂ ಸಾಧ್ಯ!


















