ಮುಂಬೈ/ಬುಲ್ಡಾನಾ : ಪತ್ನಿಯನ್ನು ಕೊಲೆ ಮಾಡಲು ಸತತ ಮೂರು ಬಾರಿ ಆಕೆಯ ಊಟಕ್ಕೆ ವಿಷ ಬೆರೆಸಿ ವಿಫಲನಾದ ಪತಿಯೊಬ್ಬ, ಕೊನೆಗೆ ಸುಪಾರಿ ಹಂತಕರಿಗೆ ಹಣ ನೀಡಿ ಅಪಘಾತ ಮಾಡಿಸುವ ಮೂಲಕ ಆಕೆಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತಾದರೂ, ಪೊಲೀಸರ ಚಾಣಾಕ್ಷತನದ ತನಿಖೆಯಿಂದಾಗಿ ಪತಿಯೇ ಹೆಣೆದಿದ್ದ ಕೊಲೆಯ ಅಸಲಿ ಸಂಚು ಬಯಲಾಗಿದೆ.
3 ಬಾರಿ ವಿಷವುಣಿಸಲು ಕೊಲ್ಲಲು ಯತ್ನಿಸಿದ್ದ
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ವೃಷಾಲಿ ಎಂಬ ಮಹಿಳೆಯೇ ಕೊಲೆಯಾದ ದುರ್ದೈವಿ. ಆಕೆಯ ಪತಿ ಪ್ರಕಾಶ್ ಗವಾಂಡೆ ಈ ಭೀಕರ ಕೃತ್ಯದ ರೂವಾರಿ. ಆರೋಪಿ ಪ್ರಕಾಶ್ ತನ್ನ ಪತ್ನಿಯನ್ನು ಮುಗಿಸಲು ಸತತವಾಗಿ ಸಂಚು ರೂಪಿಸುತ್ತಿದ್ದ. ಇದರ ಭಾಗವಾಗಿ ಆಕೆಯ ಊಟದಲ್ಲಿ ಮೂರು ಬಾರಿ ವಿಷ ಬೆರೆಸಿ ಸಾಯಿಸಲು ಯತ್ನಿಸಿದ್ದ. ಆದರೆ, ಆತನ ಈ ಮೂರೂ ಪ್ರಯತ್ನಗಳು ವಿಫಲವಾಗಿದ್ದವು. ಇದರಿಂದ ಹತಾಶನಾದ ಆತ, ತನ್ನ ಪತ್ನಿಯನ್ನು ಹೇಗಾದರೂ ಮಾಡಿ ಸಾಯಿಸಲೇಬೇಕೆಂದು ನಿರ್ಧರಿಸಿ ಮಂಗಳೇಶ್ ಚುಲ್ಕರ್ ಎಂಬಾತನಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದ.
ಅಪಘಾತ ನಡೆಸಿ ಹತ್ಯೆ
ಸುಪಾರಿ ಪಡೆದ ಮಂಗಳೇಶ್, ವೃಷಾಲಿಯನ್ನು ಹತ್ಯೆ ಮಾಡುವ ಜವಾಬ್ದಾರಿಯನ್ನು ಮನೀಶ್ ಸೂರ್ಯವಂಶಿ ಎಂಬ ಚಾಲಕನಿಗೆ ವಹಿಸಿದ್ದ. ಮಾರ್ಚ್ 2ರಂದು ವೃಷಾಲಿ ಅವರು ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಬಿಳಿ ಬಣ್ಣದ ಟಾಟಾ ಇಂಟ್ರಾ (Tata Intra) ವಾಹನವೊಂದು ಹಿಂದಿನಿಂದ ಬಂದು ಆಕೆಯ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವೃಷಾಲಿ ಅವರು ತೀವ್ರ ಪೆಟ್ಟುಬಿದ್ದು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆರಂಭದಲ್ಲಿ ಇದೊಂದು ಹಿಟ್ ಅಂಡ್ ರನ್ ಅಥವಾ ಸಾಮಾನ್ಯ ರಸ್ತೆ ಅಪಘಾತ ಎಂದೇ ಎಲ್ಲರೂ ಭಾವಿಸಿದ್ದರು.
ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ವೃಷಾಲಿ ಅವರ ವಾಹನದ ಸುತ್ತಮುತ್ತಲೇ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ‘ಎಂಎಚ್ 28 ಬಿಬಿ 5753’ ನೋಂದಣಿ ಸಂಖ್ಯೆಯ ಟಾಟಾ ಇಂಟ್ರಾ ವಾಹನದ ಮೇಲೆ ಸಂಶಯ ಮೂಡಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ವಾಹನದ ಜಾಡು ಹಿಡಿದು ಹೋದ ಪೊಲೀಸರು, ಅದರ ಮಾಲೀಕ ಮನೀಶ್ ಸೂರ್ಯವಂಶಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ, ವೃಷಾಲಿಯ ಪತಿ ಪ್ರಕಾಶ್ ನೀಡಿದ್ದ ಸುಪಾರಿಯ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ಗವಾಂಡೆ, ಮಂಗಳೇಶ್ ಚುಲ್ಕರ್ ಮತ್ತು ಮನೀಶ್ ಸೂರ್ಯವಂಶಿ ಮೂವರನ್ನೂ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಕೊಲೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಶೀಘ್ರವೇ ‘LPG’ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ | ಬೊಮ್ಮಾಯಿ



















