ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ವಾಕ್ಸಮರ ದಿನೇ ದಿನೇ ತಾರಕಕ್ಕೇರುತ್ತಿದೆ. ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ‘ಹೊರ್ಮುಜ್ ಜಲಸಂಧಿ’ಯನ್ನೇ (Strait of Hormuz) ನಾವು ನಮ್ಮ ವಶಕ್ಕೆ ಪಡೆಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇರಾನ್ ಕೂಡ ಅಷ್ಟೇ ಕಠಿಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ ಮತ್ತು ಇಸ್ರೇಲ್‌ನಿಂದ ದಾಳಿಗಳು ಮುಂದುವರಿದರೆ, ಮಧ್ಯಪ್ರಾಚ್ಯದಿಂದ ಒಂದು ಲೀಟರ್ ತೈಲವನ್ನು ಕೂಡ ರಫ್ತು ಮಾಡಲು ಬಿಡುವುದಿಲ್ಲ ಎಂದು ಇರಾನ್ ಗುಡುಗಿದೆ.
ಟ್ರಂಪ್ ಹೇಳಿದ್ದೇನು?
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಹ್ರಾನ್ ಜಾಗತಿಕ ತೈಲ ಪೂರೈಕೆಗೆ ಅಡ್ಡಿಪಡಿಸಿದರೆ, ಅದು ಇರಾನ್‌ನ ಅಂತ್ಯ ಎಂದೇ ಪರಿಗಣಿಸಬೇಕು. ಅವರು ಮಾಡಬೇಕಾದ್ದನ್ನೆಲ್ಲಾ ಮಾಡಿದ್ದಾರೆ, ಇನ್ನು ಮುಂದೆ ಯಾವುದೇ ಹುಚ್ಚಾಟಕ್ಕೆ ಮುಂದಾಗದಿರುವುದು ಒಳಿತು. ಒಂದು ವೇಳೆ ಅವರು ಏನಾದರೂ ಅನಾಹುತ ಸೃಷ್ಟಿಸಿದರೆ, ಅಂದೇ ಆ ದೇಶದ ಅಂತ್ಯವಾಗಲಿದೆ ಮತ್ತು ಆ ದೇಶದ ಹೆಸರನ್ನೇ ನೀವು ಮತ್ತೆ ಕೇಳುವುದಿಲ್ಲ,” ಎಂದು ಗುಡುಗಿದ್ದಾರೆ.
ಇದಲ್ಲದೆ, ತಮ್ಮ ‘ಟ್ರೂತ್ ಸೋಷಿಯಲ್’ (Truth Social) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್ ಏನಾದರೂ ತೈಲ ಹರಿವನ್ನು ತಡೆದರೆ, ಈವರೆಗೆ ಅನುಭವಿಸಿದ ಪೆಟ್ಟಿಗಿಂತ 20 ಪಟ್ಟು ಹೆಚ್ಚು ಪ್ರಬಲವಾದ ಹೊಡೆತವನ್ನು ಅಮೆರಿಕದಿಂದ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸದ್ಯ ಹೊರ್ಮುಜ್ ಜಲಸಂಧಿ ಮುಕ್ತವಾಗಿದ್ದು, ಅದನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯುವ ಬಗ್ಗೆಯೂ ಚಿಂತಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ತಿರುಗೇಟು
ಟ್ರಂಪ್ ಅವರ ಈ ಬೆದರಿಕೆಗಳಿಗೆ ಇರಾನ್ ಕಿಂಚಿತ್ತೂ ಜಗ್ಗಿಲ್ಲ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಹನಿ ತೈಲವೂ ರಫ್ತಾಗಲು ಬಿಡುವುದಿಲ್ಲ ಎಂದು ಇರಾನ್‌ನ ಪ್ರಬಲ ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಮಂಗಳವಾರ ಸ್ಪಷ್ಟಪಡಿಸಿದೆ. “ಅಮೆರಿಕದ ಸೇನೆ ಮತ್ತು ಜಿಯೋನಿಸ್ಟ್ ಆಡಳಿತವು (ಇಸ್ರೇಲ್) ಇರಾನ್ ಮತ್ತು ಅದರ ಮೂಲಸೌಕರ್ಯಗಳ ಮೇಲಿನ ಆಕ್ರಮಣವನ್ನು ಮುಂದುವರಿಸಿದರೆ, ಮುಂದಿನ ಆದೇಶದವರೆಗೆ ಶತ್ರುಗಳಿಗೆ ಮತ್ತು ಅವರ ಪಾಲುದಾರರಿಗೆ ಈ ಪ್ರದೇಶದಿಂದ ಕನಿಷ್ಠ ಒಂದು ಲೀಟರ್ ತೈಲವನ್ನು ಸಹ ರಫ್ತು ಮಾಡಲು ನಮ್ಮ ಸಶಸ್ತ್ರ ಪಡೆಗಳು ಅವಕಾಶ ನೀಡುವುದಿಲ್ಲ,” ಎಂದು ಐಆರ್‌ಜಿಸಿ ಹೇಳಿದೆ. ಇದಕ್ಕೂ ಮುನ್ನ, ಇರಾನ್ ವಿದೇಶಾಂಗ ಸಚಿವಾಲಯವು ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್‌ಗಳು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಮುನ್ನೆಚ್ಚರಿಕೆ ನೀಡಿತ್ತು.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ
ಒಮಾನ್ ಮತ್ತು ಇರಾನ್ ನಡುವೆ ಇರುವ ಹೊರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿದೆ. ಜಗತ್ತಿನ ಶೇ.20ರಷ್ಟು ತೈಲ ಪೂರೈಕೆ ಈ ಕಿರಿದಾದ ಮಾರ್ಗದ ಮೂಲಕವೇ ನಡೆಯುತ್ತದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದಾಗಿ ಈ ಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದು ಜಾಗತಿಕ ತೈಲ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟುಮಾಡಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಸುಮಾರು 120 ಡಾಲರ್‌ಗಳಿಗೆ ತಲುಪಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಹೊರ್ಮುಜ್ ಜಲಸಂಧಿ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟರೆ, ಮುಂಬರುವ ದಿನಗಳಲ್ಲಿ ತೈಲ ಬೆಲೆ ಮತ್ತಷ್ಟು ಗಗನಕ್ಕೇರುವ ಆತಂಕ ಜಾಗತಿಕ ಮಾರುಕಟ್ಟೆಯನ್ನು ಕಾಡುತ್ತಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಡೆಡ್ಲಿ ಮರ್ಡರ್.. ವೃದ್ಧೆಯನ್ನು ಬರ್ಬರವಾಗಿ ಹ*ತ್ಯೆಗೈದ ಇಬ್ಬರು ಅರೆಸ್ಟ್!



















