ಬೆಂಗಳೂರು : ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಜರ್ಮನಿಯ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್-ಬೆಂಝ್ ತನ್ನ ಬಹುನಿರೀಕ್ಷಿತ ‘ವಿ-ಕ್ಲಾಸ್’ (V-Class) ಐಷಾರಾಮಿ ಎಂಪಿವಿ (MPV) ವಾಹನವನ್ನು ಮರಳಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳಿಗೆ ಏಕರೂಪವಾಗಿ 1.4 ಕೋಟಿ ರೂಪಾಯಿ (ಎಕ್ಸ್-ಶೋರೂಂ) ಬೆಲೆಯನ್ನು ನಿಗದಿಪಡಿಸಲಾಗಿದೆ.
ಸಾಂಪ್ರದಾಯಿಕ ಐಷಾರಾಮಿ ಸೆಡಾನ್ ಕಾರುಗಳಿಗಿಂತ ಹೆಚ್ಚಿನ ಒಳಾಂಗಣ ಸ್ಥಳಾವಕಾಶ ಮತ್ತು ಹೆಡ್‌ರೂಮ್ ಬಯಸುವ ಸಿರಿವಂತ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಸ್ತೃತ ವೀಲ್‌ಬೇಸ್ ಹೊಂದಿರುವ ಹೊಸ ವಿ-ಕ್ಲಾಸ್ ವಾಹನವು ಟೊಯೋಟಾ ವೆಲ್‌ಫೈರ್ ಮತ್ತು ಲೆಕ್ಸಸ್ ಎಲ್‌ಎಂ ನಂತಹ ಹೈ-ಎಂಡ್ ವಾಹನಗಳಿಗೆ ಹಾಗೂ ಸ್ವತಃ ಮರ್ಸಿಡಿಸ್‌ನ ಎಸ್-ಕ್ಲಾಸ್‌ಗೆ ಪ್ರಬಲ ಪೈಪೋಟಿ ನೀಡಲಿದೆ. ಬೆಲೆಯನ್ನು ಸ್ಪರ್ಧಾತ್ಮಕವಾಗಿಡುವ ಉದ್ದೇಶದಿಂದ ಪುಣೆಯಲ್ಲಿರುವ ತನ್ನ ಘಟಕದಲ್ಲೇ ಈ ವಾಹನವನ್ನು ಸ್ಥಳೀಯವಾಗಿ ಜೋಡಣೆ ಮಾಡಲು ಕಂಪನಿ ನಿರ್ಧರಿಸಿದೆ.
ದೊಡ್ಡ ವಾಹನ
ಈ ಹೊಸ ವಿ-ಕ್ಲಾಸ್‌ನ ಅತ್ಯಂತ ಗಮನಾರ್ಹ ಅಂಶವೆಂದರೆ ಅದರ ಬೃಹತ್ ಗಾತ್ರ. 5.3 ಮೀಟರ್‌ಗಿಂತಲೂ ಹೆಚ್ಚಿನ ಉದ್ದ ಮತ್ತು 3.4 ಮೀಟರ್ ಉದ್ದದ ವೀಲ್‌ಬೇಸ್ ಹೊಂದಿರುವ ಈ ವಾಹನವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತಿದೊಡ್ಡ ಪ್ರಯಾಣಿಕ ಕಾರುಗಳಲ್ಲಿ ಒಂದಾಗಿದೆ. ಇಷ್ಟು ದೊಡ್ಡ ಮೊತ್ತದ ಬೆಲೆಗೆ ತಕ್ಕಂತೆ ಆಕರ್ಷಕವಾಗಿ ಕಾಣಲು ಮರ್ಸಿಡಿಸ್ ಕಂಪನಿಯು ಎಎಂಜಿ (AMG) ಲೈನ್ ಬಾಡಿ ಪ್ಯಾಕೇಜ್ ಅನ್ನು ಕಡ್ಡಾಯವಾಗಿ (ಸ್ಟ್ಯಾಂಡರ್ಡ್) ನೀಡಿದೆ.
ಮುಂಭಾಗದಲ್ಲಿ ಹೊಳೆಯುವ ಕಪ್ಪು ಬಣ್ಣದ ಗ್ರಿಲ್ ಮತ್ತು ದೊಡ್ಡ ಬೈ-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ವಾಹನದ ಪಾರ್ಶ್ವದಲ್ಲಿ 18-ಇಂಚಿನ ಅಲಾಯ್ ವೀಲ್‌ಗಳು, ರೂಫ್ ರೈಲ್‌ಗಳು ಮತ್ತು ಇಕ್ಕಟ್ಟಾದ ಪಾರ್ಕಿಂಗ್ ಜಾಗಗಳಲ್ಲೂ ಸುಲಭವಾಗಿ ಒಳಬರಲು ಮತ್ತು ಹೊರಹೋಗಲು ಅನುವಾಗುವಂತೆ ದೊಡ್ಡದಾದ ಸ್ಲೈಡಿಂಗ್ ಬಾಗಿಲುಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಹೊಗೆಯಾಡಿಸಿದ (smoked) ವಿನ್ಯಾಸದ ಹೊಸ ಎಲ್‌ಇಡಿ ಟೈಲ್ ಲ್ಯಾಂಪ್‌ಗಳಿದ್ದು, ಒಟ್ಟು ಐದು ವಿಭಿನ್ನ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಈ ವಾಹನ ಲಭ್ಯವಿದೆ.
ಅತ್ಯುತ್ತಮ ಸ್ಥಳವಾಕಾಶ
ಚಾಲಕರನ್ನು ಇಟ್ಟುಕೊಂಡು ಪ್ರಯಾಣಿಸುವವರಿಗಾಗಿಯೇ ಈ ವಾಹನದ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಉದ್ದವಾದ ವೀಲ್‌ಬೇಸ್‌ನಿಂದಾಗಿ ಕಾಲು ಚಾಚಲು ವಿಪುಲವಾದ ಸ್ಥಳಾವಕಾಶವಿದ್ದು, ಗ್ರಾಹಕರು ನಾಲ್ಕು ಅಥವಾ ಆರು ಸೀಟುಗಳ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಎರಡನೇ ಸಾಲಿನಲ್ಲಿ ಲೆಗ್ ರೆಸ್ಟ್‌ಗಳಿರುವ ದೊಡ್ಡ ರಿಕ್ಲೈನರ್ ಕುರ್ಚಿಗಳನ್ನು ನೀಡಲಾಗಿದ್ದು, ಇವುಗಳಿಗೆ ಮಸಾಜ್ ಮತ್ತು ವೆಂಟಿಲೇಶನ್ ಸೌಲಭ್ಯವಿದೆ.
ಅಗತ್ಯವಿದ್ದರೆ ಮೂರನೇ ಸಾಲಿನ ಸೀಟುಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಅಥವಾ ಮುಂಭಾಗಕ್ಕೆ ಇಲ್ಲವೇ ಹಿಂಭಾಗಕ್ಕೆ ಮುಖಮಾಡುವಂತೆ ಹೊಂದಿಸಿಕೊಳ್ಳಬಹುದು. ಈ ವಿಭಾಗದ ವಾಹನಗಳಲ್ಲಿ ಅಪರೂಪವೆಂಬಂತೆ ಮೂರನೇ ಸಾಲಿನ ಸೀಟುಗಳಿಗೂ ವೆಂಟಿಲೇಶನ್ ಸೌಲಭ್ಯ ನೀಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ 12.3-ಇಂಚಿನ ಎರಡು ದೊಡ್ಡ ಡಿಸ್‌ಪ್ಲೇಗಳನ್ನು (ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್) ಅಳವಡಿಸಲಾಗಿದೆ. ಜೊತೆಗೆ 15-ಸ್ಪೀಕರ್‌ಗಳ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 64 ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ವ್ಯವಸ್ಥೆಯಿದೆ.
ಪವರ್ಫುಲ್ ಎಂಜಿನ್
ಮರ್ಸಿಡಿಸ್ ವಿ-ಕ್ಲಾಸ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ವಿ300 ಪೆಟ್ರೋಲ್ ರೂಪಾಂತರವು 2.0-ಲೀಟರ್ ಟರ್ಬೋಚಾರ್ಜ್ಡ್ ಇಂಜಿನ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿದ್ದು, 231 ಅಶ್ವಶಕ್ತಿ (hp) ಮತ್ತು 370 Nm ಟಾರ್ಕ್ ಉತ್ಪಾದಿಸುತ್ತದೆ. ವೇಗೋತ್ಕರ್ಷದ ಸಮಯದಲ್ಲಿ ಎಲೆಕ್ಟ್ರಿಕ್ ಮೋಟಾರ್ 20 hp ಮತ್ತು 200 Nm ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ. ಡೀಸೆಲ್ ಪ್ರಿಯರಿಗಾಗಿ ಇರುವ ವಿ300d ರೂಪಾಂತರವು 2.0-ಲೀಟರ್ ಟರ್ಬೋ ಇಂಜಿನ್ ಹೊಂದಿದ್ದು, 237 ಅಶ್ವಶಕ್ತಿ ಹಾಗೂ 500 Nm ಟಾರ್ಕ್ ಒದಗಿಸುತ್ತದೆ. ಎರಡೂ ಇಂಜಿನ್‌ಗಳು 9-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿವೆ.
ಸುರಕ್ಷತೆಯ ದೃಷ್ಟಿಯಿಂದ ಈ ವಾಹನದಲ್ಲಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಚಾಲಕನ ನಿದ್ರೆಮಂಪರು ಪತ್ತೆಹಚ್ಚುವ ವ್ಯವಸ್ಥೆ (ಡ್ರೈವರ್ ಡ್ರೌಸಿನೆಸ್ ಡಿಟೆಕ್ಷನ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಲೆವೆಲ್ 2 ಎಡಿಎಎಸ್ (ADAS) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ, ಚಲಿಸುವ ಐಷಾರಾಮಿ ಬೋರ್ಡ್‌ರೂಮ್‌ನಂತಹ ಅನುಭವವನ್ನು ನೀಡುವ ಈ ವಾಹನ, ವಿಐಪಿ ಗ್ರಾಹಕರಿಗೆ ಹೇಳಿಮಾಡಿಸಿದಂತಿದೆ.
ಇದನ್ನೂ ಓದಿ : ಜಿಬಿಎಯಿಂದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ವಿಳಂಬ | 2,600ಕ್ಕೂ ಹೆಚ್ಚು ಮಕ್ಕಳಿಗೆ ಸಂಕಷ್ಟ!



















