ಬೆಂಗಳೂರು : ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ಗೆ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಈ ಅಪ್‌ಡೇಟ್‌ನಲ್ಲಿ ಪ್ರಮುಖವಾಗಿ ‘ರಿಚ್ ಟೆಕ್ಸ್ಟ್ ಎಡಿಟರ್’ (Rich Text Editor) ಸೌಲಭ್ಯವನ್ನು ಬಿಡುಗಡೆ ಮಾಡಲಾಗಿದ್ದು, ಇದು ಸದ್ಯಕ್ಕೆ ಕೇವಲ ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದೆ.
ಈ ಹೊಸ ಟೂಲ್ ಸಹಾಯದಿಂದ ಬಳಕೆದಾರರು ತಮ್ಮ ಸಂದೇಶಗಳನ್ನು ಹೆಚ್ಚು ಆಕರ್ಷಕವಾಗಿ ಫಾರ್ಮ್ಯಾಟ್ ಮಾಡಬಹುದು. ಇದರಲ್ಲಿ ಹೆಡಿಂಗ್‌ಗಳು, ಟೇಬಲ್‌ಗಳು, ಲಿಸ್ಟ್‌ಗಳು, ಕೋಟ್‌ಗಳು ಮತ್ತು ಕೋಡ್ ಬ್ಲಾಕ್‌ಗಳನ್ನು ಬಳಸುವ ಅವಕಾಶವಿದೆ. ಜೊತೆಗೆ ಫೋಟೋ ಮತ್ತು ವಿಡಿಯೋಗಳನ್ನು ನೇರವಾಗಿ ಸಂದೇಶದೊಳಗೆ ಎಂಬೆಡ್ ಮಾಡಬಹುದು. ಈ ಎಡಿಟರ್ ಬಳಸಿ ಒಂದೇ ಮೆಸೇಜ್‌ನಲ್ಲಿ ಗರಿಷ್ಠ 32,768 ಅಕ್ಷರಗಳನ್ನು ಕಳುಹಿಸಬಹುದು ಎಂದು ಟೆಲಿಗ್ರಾಮ್ ತಿಳಿಸಿದೆ.
ಒಂದೇ ವೇದಿಕೆಯಲ್ಲಿ ಸಂಬಂಧಿತ ಗ್ರೂಪ್‌ಗಳು
ಈ ಅಪ್‌ಡೇಟ್‌ನ ಮತ್ತೊಂದು ಆಕರ್ಷಕ ಫೀಚರ್ ಎಂದರೆ ‘ಟೆಲಿಗ್ರಾಮ್ ಕಮ್ಯುನಿಟೀಸ್’ (Telegram Communities). ಒಂದೇ ವಿಷಯಕ್ಕೆ ಸಂಬಂಧಿಸಿದ ವಿಭಿನ್ನ ಗ್ರೂಪ್‌ಗಳು, ಚಾನೆಲ್‌ಗಳು ಹಾಗೂ ಬಾಟ್‌ಗಳನ್ನು ಒಂದೇ ವೇದಿಕೆಯಡಿ ಸಂಘಟಿಸಲು ಇದು ಸಹಾಯ ಮಾಡುತ್ತದೆ. ಕಮ್ಯುನಿಟಿಯ ಸದಸ್ಯರು ಸಂಬಂಧಿತ ಚಾಟ್‌ಗಳಿಗೆ ಸುಲಭವಾಗಿ ಸೇರಬಹುದು. ಈ ಕಮ್ಯುನಿಟಿ ಚಾಟ್‌ಗಳನ್ನು ಎಲ್ಲರಿಗೂ ಕಾಣುವಂತೆ (Visible) ಅಥವಾ ಅಡ್ಮಿನ್ ಮತ್ತು ಸದಸ್ಯರಿಗೆ ಮಾತ್ರ ಕಾಣುವಂತೆ (Hidden) ಸೆಟ್ಟಿಂಗ್ಸ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ಸೆಟ್ಟಿಂಗ್ಸ್‌ಗೆ ಅನುಗುಣವಾಗಿ ಸದಸ್ಯರು ಹೊಸ ಚಾಟ್‌ಗಳನ್ನು ಸಹ ಸೇರಿಸಬಹುದು.
ಎಫೆಮೆರಲ್ ಬಾಟ್ ಮೆಸೇಜ್‌ಗಳು ಮತ್ತು ಜಿಫ್ (GIF) ವಿಸ್ತರಣೆ
ಈ ಹೊಸ ಅಪ್‌ಡೇಟ್‌ನಲ್ಲಿ ಬಾಟ್‌ಗಳ ಮೂಲಕ ಕಳುಹಿಸಲಾಗುವ ‘ಎಫೆಮೆರಲ್ ಬಾಟ್ ಮೆಸೇಜ್’ (Ephemeral Bot Messages) ಪರಿಚಯಿಸಲಾಗಿದೆ. ಗ್ರೂಪ್‌ಗಳಲ್ಲಿರುವ ಬಾಟ್‌ಗಳು ಇನ್ನು ಮುಂದೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣುವಂತಹ ಮೆಸೇಜ್‌ಗಳನ್ನು ಕಳುಹಿಸಬಹುದು. ಉದಾಹರಣೆಗೆ, ಶುಭಾಶಯಗಳು, ಖಾಸಗಿ ಎಐ ಸಾರಾಂಶ, ಎರರ್ ಮತ್ತು ಕನ್ಫರ್ಮೇಷನ್‌ಗಳನ್ನು ನಿರ್ದಿಷ್ಟ ಕಮಾಂಡ್‌ಗಳ ಮೂಲಕ ರವಾನಿಸಬಹುದು. ಈ ಮೆಸೇಜ್‌ಗಳು ಕಮಾಂಡ್ ಬಳಸಿದ ವ್ಯಕ್ತಿಗೆ ಹಾಗೂ ಬಾಟ್‌ಗೆ ಮಾತ್ರ ಕಾಣಿಸುತ್ತದೆ. ಇದಲ್ಲದೆ, ಟೆಲಿಗ್ರಾಮ್ ತನ್ನ GIF ಲೈಬ್ರರಿಯನ್ನು ವಿಸ್ತರಿಸಿದ್ದು, ಈಗ 36 ಭಾಷೆಗಳಲ್ಲಿ 350 ದಶಲಕ್ಷಕ್ಕೂ ಹೆಚ್ಚು GIF ಗಳನ್ನು ಖಾಸಗಿಯಾಗಿ ಹುಡುಕುವ ಅವಕಾಶವನ್ನು ಬಳಕೆದಾರರಿಗೆ ಒದಗಿಸಿದೆ.
ಇದನ್ನೂ ಓದಿ : ರೋಹಿತ್ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಲಾರ್ಡ್ಸ್ ಶತಕ : ಮಾಜಿ ಕ್ರಿಕೆಟಿಗ ಸಬಾ ಕರೀಮ್ ವಿಶ್ಲೇಷಣೆ!



















