ಆನೇಕಲ್: ವ್ಯಕ್ತಿಯೊಬ್ಬ ಪತ್ನಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂರ್ಯನಗರ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾದ ದೀಪಾಂತ ಸಬರ (31) ಮತ್ತು ಪತ್ನಿ ಮಂಜುಳಾ ಸಬರ (27) ಮೃತರು. 20 ದಿನಗಳ ಹಿಂದಷ್ಟೇ ದಂಪತಿ ಬಾಡಿಗೆ ಮನೆಗೆ ಬಂದಿದ್ದರು. ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ನಡುವೆ ಜಗಳ ನಡೆದಿದ್ದು, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮನೆ ಮಾಲೀಕ ಶಿವಕುಮಾರ್ ಇಪ್ಪತ್ತು ದಿನಗಳ ಹಿಂದೆ ದಂಪತಿಗೆ ಮನೆ ಕೊಟ್ಟಿದ್ದರು. ಗುರುವಾರ ರಾತ್ರಿ ಮನೆ ಮಾಲೀಕರ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆಯ ಶವ ಕಾಣಿಸಿದೆ. ಕೂಡಲೇ ಸೂರ್ಯ ನಗರ ಪೊಲೀಸರಿಗೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಪತ್ನಿಯ ಶವದ ಮುಂದೆ ಪತಿ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿ ಆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರಿಗೆ ಸಿಕ್ಕ ಮೊಬೈಲ್ನಲ್ಲಿ ಬೆಳಕಿಗೆ ಬಂದಿದೆ.
ಪತಿ ಒಡಿಶಾ ಭಾಷೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬಂದ ಸೂರ್ಯನಗರ ಪೊಲೀಸರು ಮನೆ ಬಾಗಿಲು ಮುರಿದು ನೋಡಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ಮಂಚದ ಮೇಲೆ ಪತ್ನಿ ಕೊಲೆಯಾಗಿರುವುದು ಗೊತ್ತಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನದ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮೃತದೇಹಗಳು ಕೊಳೆಯುವ ಸ್ಥಿತಿಗೆ ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಡಿವೈಎಸ್‌ಪಿ ಮಲ್ಲೇಶ್ ಗೌಡ, ಸೂರ್ಯ ನಗರ ಠಾಣೆಯ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ | ಪ್ರಿಯತಮೆಯ ಮೋಸದ ಬಲೆಗೆ ಸಿಕ್ಕಿ ಯುವಕ ಸೂಸೈಡ್



















