ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು, ರೈತರ ಪರವಾಗಿ ದೊಡ್ಡ ಮಟ್ಟದ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಜುಲೈ 5ರಿಂದ ಮೂರು ದಿನಗಳ ಕಾಲ ಬಿಡದಿಯಲ್ಲಿ ಪ್ರತಿಭಟನೆ ನಡೆಸಲು ಪಕ್ಷ ಯೋಜನೆ ರೂಪಿಸಿದ್ದು, ಈ ಹೋರಾಟದಲ್ಲಿ ಜೆಡಿಎಸ್ ಕೂಡ ಕೈಜೋಡಿಸುವ ಸಾಧ್ಯತೆ ಇದೆ.
ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಗೆ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಬೇಡಿಕೆಗಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಹೋರಾಟವನ್ನು ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ.
ಇಲ್ಲಿಯವರೆಗೆ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡಿರಲಿಲ್ಲ ಎಂಬ ಟೀಕೆ ಎದುರಿಸುತ್ತಿದ್ದ ಬಿಜೆಪಿ, ಇದೀಗ ಕಾಂಗ್ರೆಸ್ ನಾಯಕರ ಆರೋಪಗಳಿಗೆ ರಾಜಕೀಯವಾಗಿ ತಿರುಗೇಟು ನೀಡುವ ಉದ್ದೇಶದಿಂದ ಹೋರಾಟದ ಅಖಾಡಕ್ಕಿಳಿಯಲು ಸಜ್ಜಾಗಿದೆ.
ಇತ್ತೀಚಿನ ಅಡ್ಡಮತದಾನ ಬೆಳವಣಿಗೆಯಿಂದ ಪಕ್ಷದೊಳಗೆ ಉಂಟಾಗಿರುವ ಗೊಂದಲದ ನಡುವೆಯೇ, ಬಿಡದಿ ಹೋರಾಟದ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿ ಮತ್ತೆ ಶಕ್ತಿ ಪ್ರದರ್ಶನ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಇಂದಿನಿಂದ ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಮಹಾ ಕಾರ್ಯಾಚರಣೆ!


















