ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ 11ನೇ ಮೈಲಿ ಸಮೀಪ ಅತೀವೇಗದಲ್ಲಿ ಬಂದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಲಾರಿಗೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಸುಟ್ಟು ಕರಕಲಾಗಿದೆ.
ಅದೇ ವೇಳೆ ಪಕ್ಕದಲ್ಲೇ ಹಾಲು ತುಂಬಿಕೊಂಡಿದ್ದ ಮತ್ತೊಂದು ಲಾರಿ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಬೆಂಕಿಯ ಕೆನ್ನಾಲಿಗೆ ಅದಕ್ಕೂ ವ್ಯಾಪಿಸಿದೆ. ಪರಿಣಾಮ ಎರಡೂ ಲಾರಿಗಳು ಬೆಂಕಿಗೆ ಆಹುತಿಯಾಗಿ ಬಹುತೇಕ ಸುಟ್ಟು ಭಸ್ಮವಾಗಿವೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎರಡೂ ಲಾರಿಗಳ ಚಾಲಕರು ಸಮಯಪ್ರಜ್ಞೆಯಿಂದ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಲ್ಲದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎರಡೂ ಲಾರಿಗಳು ಬಹುತೇಕ ಸುಟ್ಟು ಭಸ್ಮ ಆಗಿವೆ.
ಇದನ್ನೂ ಓದಿ : ಕಾಡಾನೆ ಜೊತೆ ರೀಲ್ಸ್ ಹುಚ್ಚಾಟ – ಶಿಲ್ಪಾ ಗೌಡ ವಿರುದ್ದ ಪರಿಸರ ಪ್ರೇಮಿಗಳ ಆಕ್ರೋಶ!



















