ರಾಂಚಿ : ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಏರ್ ಆಂಬ್ಯುಲೆನ್ಸ್ ಪತನದಲ್ಲಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ರೋಗಿ, ಆತನ ಪತ್ನಿ ಸೇರಿದಂತೆ ಒಟ್ಟು ಏಳು ಮಂದಿ ದುರ್ಮರಣ ಹೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಪ್ರಾಣಾಪಾಯದಲ್ಲಿದ್ದ 41 ವರ್ಷದ ಸಂಜಯ್ ಎಂಬವರ ಜೀವ ಉಳಿಸಲು, ಬಡ ಕುಟುಂಬವು ಬಂಧು-ಮಿತ್ರರಿಂದ ಬರೋಬ್ಬರಿ 8 ಲಕ್ಷ ರೂಪಾಯಿ ಸಾಲ ಮಾಡಿ ಏರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡು, ದೆಹಲಿಗೆ ಕರೆದೊಯ್ಯುತ್ತಿದ್ದಾಗಲೇ ಈ ಘೋರ ದುರಂತ ಸಂಭವಿಸಿದೆ.

ಜಾರ್ಖಂಡ್‌ನ ಲಾತೇಹರ್ ಜಿಲ್ಲೆಯ ಚಾಂದ್ವಾ ನಿವಾಸಿಯಾಗಿದ್ದ ಸಂಜಯ್, ತಮ್ಮ ಸಣ್ಣ ಹೋಟೆಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಜೀವವನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಕುಟುಂಬಸ್ಥರು, ಸ್ಥಳೀಯವಾಗಿ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದರು.
ಆಸ್ತಿ ಮಾರಾಟಕ್ಕೂ ಸಿದ್ಧವಾಗಿದ್ದ ಕುಟುಂಬ
ಸಂಜಯ್ ಅವರ ದೆಹಲಿಯ ಚಿಕಿತ್ಸಾ ವೆಚ್ಚ ಹಾಗೂ ಏರ್ ಆಂಬ್ಯುಲೆನ್ಸ್ ಬಾಡಿಗೆ ಭರಿಸಲು ಕುಟುಂಬವು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಸಂಜಯ್ ಸಹೋದರ ಅಜಯ್, ತಮ್ಮ ಅಣ್ಣನ ಜೀವ ಉಳಿಸಲು ಮನೆ, ಆಸ್ತಿ ಹಾಗೂ ಜಮೀನು ಮಾರಾಟ ಮಾಡಲು ಕೂಡ ಕುಟುಂಬ ಸಿದ್ಧವಿತ್ತು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಆದರೆ, ತಕ್ಷಣಕ್ಕೆ ಹಣದ ಅಗತ್ಯವಿದ್ದ ಕಾರಣ, ಸ್ನೇಹಿತರು, ಸಂಬಂಧಿಕರು ಮತ್ತು ಹಿತೈಷಿಗಳ ಬಳಿ ಸುಮಾರು 8 ಲಕ್ಷ ರೂಪಾಯಿ ಕೈಸಾಲ ಪಡೆದು ಖಾಸಗಿ ಆಸ್ಪತ್ರೆ ಹಾಗೂ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ದೆಹಲಿ ಮೂಲದ ‘ರೆಡ್‌ಬರ್ಡ್ ಏರ್‌ವೇಸ್’ ಸಂಸ್ಥೆಗೆ ಸೇರಿದ ‘ಬೀಚ್‌ಕ್ರಾಫ್ಟ್ ಸಿ90’ (Beechcraft C90) ಚಾರ್ಟರ್ ವಿಮಾನವನ್ನು ಇದಕ್ಕಾಗಿ ಬಾಡಿಗೆಗೆ ಪಡೆಯಲಾಗಿತ್ತು. ದುರದೃಷ್ಟವಶಾತ್, ಹಣ ಹೊಂದಿಸಿ ವಿಮಾನ ಹತ್ತಿದರೂ ವಿಧಿಯ ಆಟ ಬೇರೆಯಾಗಿತ್ತು.

ಟೇಕಾಫ್ ಆದ ಕೆಲವೇ ಹೊತ್ತಲ್ಲಿ ದುರಂತ
ಸೋಮವಾರ ರಾಂಚಿ ವಿಮಾನ ನಿಲ್ದಾಣದಿಂದ ರೋಗಿ ಸಂಜಯ್, ಅವರ ಪತ್ನಿ ಅರ್ಚನಾ ದೇವಿ ಹಾಗೂ ಸಂಬಂಧಿ ಧ್ರುವ್ ಕುಮಾರ್ ಅವರನ್ನು ಹೊತ್ತು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಆಂಬ್ಯುಲೆನ್ಸ್ ಚತ್ರಾ ಜಿಲ್ಲೆಯ ವ್ಯಾಪ್ತಿಯಲ್ಲಿ ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಏಳೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಟುಂಬದ ಮೂವರ ಜೊತೆಗೆ, ವಿಮಾನದ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಸಹ-ಪೈಲಟ್ ಕ್ಯಾಪ್ಟನ್ ಸವರಜ್‌ದೀಪ್ ಸಿಂಗ್, ವೈದ್ಯ ಡಾ. ವಿಕಾಸ್ ಕುಮಾರ್ ಗುಪ್ತಾ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸಚಿನ್ ಕುಮಾರ್ ಮಿಶ್ರಾ ಅವರು ಕೂಡ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಲಾತೇಹರ್‌ನಲ್ಲಿರುವ ಸಂಜಯ್ ಅವರ ನಿವಾಸದಲ್ಲಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಗೊಂದಲದ ನಡುವೆ ಶುಭ್‌ಮನ್ ಗಿಲ್ ಕಂಬ್ಯಾಕ್ ಚರ್ಚೆ


















