ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗ‘ (AI Summit)ದ ಪೆವಿಲಿಯನ್‌ನಲ್ಲಿ ಚೀನಾ ನಿರ್ಮಿತ ರೋಬೋಟ್ ಪ್ರದರ್ಶಿಸಿದ್ದು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಉತ್ತರಪ್ರದೇಶದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಪ್ರದರ್ಶನ ಮೈದಾನವನ್ನು ತಕ್ಷಣವೇ ಖಾಲಿ ಮಾಡುವಂತೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ವದೇಶಿ ತಂತ್ರಜ್ಞಾನದ ಹೆಸರಿನಲ್ಲಿ ವಿದೇಶಿ ಉತ್ಪನ್ನವನ್ನು ಪ್ರದರ್ಶಿಸಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
‘ಓರಿಯನ್’ ಹೆಸರಲ್ಲಿ ಪ್ರದರ್ಶಿಸಿದ್ದು ಚೀನಾ ರೋಬೋ
ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ದೇಶ-ವಿದೇಶಗಳ ಗಣ್ಯರು, ವಿಶ್ವನಾಯಕರು, ಪ್ರಮುಖ ಕಂಪನಿಗಳ ಸಿಇಒಗಳು, ಸ್ಟಾರ್ಟಪ್‌ಗಳು ಭಾಗವಹಿಸಿವೆ. ಇಂತಹ ಪ್ರತಿಷ್ಠಿತ ಶೃಂಗದಲ್ಲಿ ಉತ್ತರಪ್ರದೇಶದ ನೋಯ್ಡಾದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ರೋಬೋಟ್ ನಾಯಿಯೊಂದನ್ನು ಪ್ರದರ್ಶಿಸಿತ್ತು. ಆದರೆ, ಈ ರೋಬೋಟ್ ಚೀನಾದ ‘ಯೂನಿಟ್ರೀ’ (Unitree) ಕಂಪನಿಗೆ ಸೇರಿದ್ದಾಗಿದ್ದು, ಇದನ್ನು ‘ಓರಿಯನ್’ ಎಂಬ ಹೆಸರಿನಲ್ಲಿ ತಮ್ಮದೆಂದು ವಿವಿಯ ಪ್ರತಿನಿಧಿಗಳು ಪ್ರದರ್ಶಿಸಿದ್ದರು. ಭಾರತೀಯ ತಂತ್ರಜ್ಞಾನದ ವೇದಿಕೆಯಲ್ಲಿ ಚೀನಾ ನಿರ್ಮಿತ ಸಾಧನವನ್ನು ಸ್ವದೇಶಿ ಆವಿಷ್ಕಾರದಂತೆ ಬಿಂಬಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರಿ ಅಧಿಕಾರಿಗಳು, ವಿಶ್ವವಿದ್ಯಾಲಯಕ್ಕೆ ಎಕ್ಸ್‌ಪೋ ವೇದಿಕೆಯಿಂದ ಹೊರನಡೆಯಲು ಸೂಚಿಸಿದ್ದಾರೆ.
ವಿಶ್ವವಿದ್ಯಾಲಯದ ಸ್ಪಷ್ಟನೆ ಏನು?
ವಿವಾದ ತಾರಕಕ್ಕೇರುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ, “ನಾವು ಈ ರೋಬೋಟ್ ಅನ್ನು ತಯಾರಿಸಿದ್ದೇವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಇದನ್ನು ಚೀನಾದ ಯೂನಿಟ್ರೀ ಕಂಪನಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಲಾಗಿದೆ” ಎಂದು ತಿಳಿಸಿದೆ. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಇದನ್ನು ಬಳಸಲಾಗುತ್ತಿದೆಯೇ ಹೊರತು, ಇದನ್ನು ನಾವು ತಯಾರಿಸಿದ್ದೆಂದು ಹೇಳಿಲ್ಲ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ. “ನಾವು ರೋಬೋಟ್ ತಯಾರಿಸದಿದ್ದರೂ, ಮುಂದಿನ ದಿನಗಳಲ್ಲಿ ಇಂತಹ ತಂತ್ರಜ್ಞಾನಗಳನ್ನು ಭಾರತದಲ್ಲೇ ತಯಾರಿಸುವಂತಹ ಪ್ರತಿಭೆಗಳನ್ನು ರೂಪಿಸುತ್ತಿದ್ದೇವೆ” ಎಂದು ವಿವಿ ಹೇಳಿಕೆಯಲ್ಲಿ ತಿಳಿಸಿದೆ.
ನೀತಿ ನಿರೂಪಕರು ಮತ್ತು ಉದ್ಯಮದ ಮುಖಂಡರು ಭಾಗವಹಿಸುತ್ತಿರುವ ಈ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಇಂತಹ ಘಟನೆ ನಡೆದಿರುವುದನ್ನು ಭದ್ರತೆ ಮತ್ತು ತಾಂತ್ರಿಕ ಪಾರದರ್ಶಕತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ವಿವಾದದ ನಂತರ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಪ್ರದರ್ಶನಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಪಾಕ್ ವಿರುದ್ಧ ಭಾರತದಿಂದ ಮತ್ತೊಂದು ಜಲಾಸ್ತ್ರ | ಸಿಂಧೂ ಬಳಿಕ ರಾವಿ ನದಿ ನೀರು ಬಂದ್ ಮಾಡಲು ಮಾಸ್ಟರ್ ಪ್ಲಾನ್



















