ನವದೆಹಲಿ : ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಡುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಭಾರತ, ಇದೀಗ ಗಡಿಯಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕ್ ವಿರುದ್ಧ ಮತ್ತೊಂದು ‘ಜಲ’ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ರಾವಿ ನದಿಯ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ಸಂಪೂರ್ಣವಾಗಿ ತಡೆಯಲು ಭಾರತ ಸಜ್ಜಾಗಿದೆ. ಈ ಮಹತ್ವದ ನಿರ್ಧಾರವು ನೆರೆಯ ದೇಶಕ್ಕೆ ಬೇಸಿಗೆಯ ಹೊತ್ತಿನಲ್ಲಿ ದೊಡ್ಡ ಮಟ್ಟದ ಆರ್ಥಿಕ ಮತ್ತು ಕೃಷಿ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ಶಹಪುರ್ ಕಂಡಿ’ ಅಣೆಕಟ್ಟು ಯೋಜನೆಯು ಅಂತಿಮ ಹಂತಕ್ಕೆ ತಲುಪಿದೆ. ಜಮ್ಮು ಕಾಶ್ಮೀರದ ಸಚಿವ ಜಾವೇದ್ ಅಹ್ಮದ್ ರಾಣಾ ಅವರು ನೀಡಿರುವ ಮಾಹಿತಿಯ ಪ್ರಕಾರ, ಈ ಯೋಜನೆಯು ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 1979ರಲ್ಲಿ ರೂಪಿತಗೊಂಡು, 1982ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಶಂಕುಸ್ಥಾಪನೆಗೊಂಡಿದ್ದ ಈ ಯೋಜನೆ, ರಾಜ್ಯಗಳ ನಡುವಿನ ಆಂತರಿಕ ಕಲಹದಿಂದಾಗಿ ದಶಕಗಳ ಕಾಲ ಕುಂಠಿತಗೊಂಡಿತ್ತು. ಆದರೆ 2008ರಲ್ಲಿ ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿದ ನಂತರ ಕಾಮಗಾರಿ ವೇಗ ಪಡೆದುಕೊಂಡಿತ್ತು.
ಬರಪೀಡಿತ ಜಿಲ್ಲೆಗಳಿಗೆ ವರದಾನ
ಸುಮಾರು 3,394 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು 55.5 ಮೀಟರ್ ಎತ್ತರವಿದೆ. ಈ ಯೋಜನೆಯಿಂದಾಗಿ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದ ರಾವಿ ನದಿಯ ನೀರನ್ನು ತಡೆಹಿಡಿದು, ಅದನ್ನು ಜಮ್ಮುಕಾಶ್ಮೀರದ ಕಥುವಾ ಮತ್ತು ಸಾಂಬಾ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಹರಿಸಲಾಗುವುದು. ಇದರಿಂದ ಪಂಜಾಬ್‌ನ 5,000 ಹೆಕ್ಟೇರ್ ಹಾಗೂ ಜಮ್ಮು ಕಾಶ್ಮೀರದ 32,000ಕ್ಕೂ ಅಧಿಕ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. “ನಮ್ಮ ಆದ್ಯತೆ ನಮ್ಮ ರೈತರು. ಬರಪೀಡಿತ ಕಂದಿ ಪ್ರದೇಶಕ್ಕೆ ನೀರುಣಿಸುವುದು ನಮ್ಮ ಮೊದಲ ಗುರಿ, ಹೀಗಾಗಿ ಪಾಕಿಸ್ತಾನಕ್ಕೆ ಹೋಗುವ ಹೆಚ್ಚುವರಿ ನೀರನ್ನು ನಿಲ್ಲಿಸಲೇಬೇಕು” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜಲ ರಾಜತಾಂತ್ರಿಕತೆಯ ಅಸ್ತ್ರ
2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟಿತ್ತು. ಭಯೋತ್ಪಾದನೆ ಮತ್ತು ಮಾತುಕತೆ ಜೊತೆಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎನ್ನುವ ಕಠಿಣ ಸಂದೇಶವನ್ನು ರವಾನಿಸಿರುವ ಭಾರತ, ಈಗ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಮೇಲೆ ತನಗಿರುವ ಸಂಪೂರ್ಣ ಹಕ್ಕನ್ನು ಚಲಾಯಿಸಲು ಮುಂದಾಗಿದೆ.
ಪಾಕಿಸ್ತಾನದ ಶೇ. 80-90ರಷ್ಟು ಕೃಷಿ ಚಟುವಟಿಕೆಗಳು ಸಿಂಧೂ ನದಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುವುದರಿಂದ, ಭಾರತದ ಈ ಕ್ರಮವು ಪಾಕಿಸ್ತಾನಕ್ಕೆ ಅಕ್ಷರಶಃ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಇದರ ಬೆನ್ನಲ್ಲೇ ಸವಾಲ್ಕೋಟ್, ರಟ್ಲೆ ಮತ್ತು ಕಿರು ಸೇರಿದಂತೆ ಹಲವು ಜಲವಿದ್ಯುತ್ ಯೋಜನೆಗಳನ್ನು ಭಾರತ ಚುರುಕುಗೊಳಿಸಿದ್ದು, ಜಲ ರಾಜತಾಂತ್ರಿಕತೆಯಲ್ಲಿ ಮೇಲುಗೈ ಸಾಧಿಸಲು ಸಜ್ಜಾಗಿದೆ.
ಇದನ್ನೂ ಓದಿ : ಭಾರತ vs ದಕ್ಷಿಣ ಆಫ್ರಿಕಾ ಕದನ | ಅಮ್ಮ ಯಾರಿಗೆ ಬೆಂಬಲಿಸಬೇಕು? ಇಕ್ಕಟ್ಟಿನಲ್ಲಿ ಮಾರ್ಕೆಲ್ ಕುಟುಂಬ!



















