ಬೆಂಗಳೂರು : ಸ್ನೇಹಿತರ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪವನ್ (24) ಮೃತ ಯುವಕ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿ ವ್ಯಾಪ್ತಿ ಐವರಕಂಡಪುರ ಎಂಬಲ್ಲಿ ಬೈಕ್ ಹಾಗೂ ಅಶೋಕಾ ಲೈಲಾಂಡ್ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನಕ್ಕೆ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪವನ್ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಿನ್ನೆ ಸಂಜೆಯಷ್ಟೇ ಪವನ್ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಲು ಹೊರಗೆ ಹೋಗಿದ್ದ. ಕೇಕ್ ಕಟ್ ಮಾಡಿ ಸ್ನೇಹಿತರ ಜೊತೆ ಸಂಭ್ರಮಿಸಿ ವಾಪಸ್ ಮನೆಗೆ ಹೋಗ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಪವನ್ ಬೆಂಗಳೂರು ಉತ್ತರ ತಾಲೂಕು ತೋಟದ ಗುಡ್ಡದಹಳ್ಳಿ ನಿವಾಸಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಬಾಣಾವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಜೈಲಲ್ಲಿ ದಿನ ಕಳೆಯಲಾಗದೆ ಸೊರಗಿ ಹೋದ ನಟ ದರ್ಶನ್.. ಬರ್ತ್‌ಡೇ ದಿನವೇ ಕೋರ್ಟ್ಗೆ ವಿಶೇಷ ಮನವಿ..!


















