ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳು 2026-27ನೇ ಆರ್ಥಿಕ ವರ್ಷದ ಆರಂಭಿಕ ಹಂತದಲ್ಲೇ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಪೂರ್ಣಗೊಳ್ಳುವ ಮುನ್ನವೇ 2,933 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ.47ರಷ್ಟು ಸಾಧನೆಯಾಗಿದೆ.

ಜಿಬಿಎ ಈ ಸಾಲಿನಲ್ಲಿ ಒಟ್ಟು 6,000 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಇನ್ನೂ ಸುಮಾರು ಒಂಬತ್ತೂವರೆ ತಿಂಗಳು ಬಾಕಿ ಇರುವಾಗಲೇ ಗುರಿಯ ಅರ್ಧದಷ್ಟು ಮೊತ್ತವನ್ನು ಸಂಗ್ರಹಿಸಿರುವುದು ಕಂದಾಯ ವಿಭಾಗದ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ತೆರಿಗೆ ಪಾವತಿಯನ್ನು ಉತ್ತೇಜಿಸಲು ಜೂನ್ 30ರವರೆಗೆ ಶೇ.5ರಷ್ಟು ರಿಯಾಯಿತಿ ಘೋಷಿಸಿರುವ ಜಿಬಿಎ ಕ್ರಮವೂ ಉತ್ತಮ ಸ್ಪಂದನೆ ಪಡೆದಿದೆ. ಇದರ ಪರಿಣಾಮವಾಗಿ ಆರಂಭಿಕ ತಿಂಗಳಲ್ಲೇ ತೆರಿಗೆ ಸಂಗ್ರಹ ವೇಗ ಪಡೆದುಕೊಂಡಿದೆ.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಜಾರಿಗೊಳಿಸಲಾದ ಬಿ-ಟು-ಎ ಖಾತಾ ಯೋಜನೆ ಕೂಡ ತೆರಿಗೆ ಸಂಗ್ರಹಕ್ಕೆ ನೆರವಾಗಿದೆ. ಪ್ರಸ್ತುತ ವಾರಕ್ಕೆ 10 ಕೋಟಿಯಿಂದ 13 ಕೋಟಿ ವರೆಗೆ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚಿನ ಮೊತ್ತದ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.
ಕೆಲವು ವಾಣಿಜ್ಯ ಕಟ್ಟಡಗಳನ್ನು ಸೀಜ್ ಮಾಡುವ ಕ್ರಮಕ್ಕೂ ನಗರಪಾಲಿಕೆಗಳು ಮುಂದಾಗಿವೆ. ಕಂದಾಯ ವಿಭಾಗದ ಅಧಿಕಾರಿಗಳಿಗೆ ವಾರವಾರದ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಿರುವುದರಿಂದ ವಸೂಲಾತಿ ಮತ್ತಷ್ಟು ಚುರುಕುಗೊಂಡಿದೆ. ಅಧಿಕಾರಿಗಳ ಪ್ರಕಾರ, ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಸುಮಾರು 300 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಉಳಿದ ಒಂಬತ್ತೂವರೆ ತಿಂಗಳಲ್ಲಿ ಕನಿಷ್ಠ ಇನ್ನೂ 3,000 ಕೋಟಿ ಸಂಗ್ರಹಿಸಿ ವಾರ್ಷಿಕ ಗುರಿಯನ್ನು ಮೀರಿಸುವ ವಿಶ್ವಾಸವನ್ನು ಜಿಬಿಎ ಹೊಂದಿದೆ.
ನಗರ ಪಾಲಿಕೆವಾರು ಆಸ್ತಿ ತೆರಿಗೆ ಸಂಗ್ರಹ
- ನಗರಪಾಲಿಕೆ – ಸಂಗ್ರಹ (ಕೋಟಿ)
ಪೂರ್ವ ನಗರಪಾಲಿಕೆ – 788 ಕೋಟಿ
ಪಶ್ಚಿಮ ನಗರಪಾಲಿಕೆ – 576 ಕೋಟಿ
ಕೇಂದ್ರ ನಗರಪಾಲಿಕೆ – 574 ಕೋಟಿ
ದಕ್ಷಿಣ ನಗರಪಾಲಿಕೆ – 539 ಕೋಟಿ
ಉತ್ತರ ನಗರಪಾಲಿಕೆ – 456 ಕೋಟಿ
ಒಟ್ಟು – 2,933 ಕೋಟಿ
ಆಸ್ತಿ ತೆರಿಗೆ ಸಂಗ್ರಹದಲ್ಲಿ ಪೂರ್ವ ನಗರಪಾಲಿಕೆ 788 ಕೋಟಿಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಪಶ್ಚಿಮ, ಕೇಂದ್ರ ಹಾಗೂ ದಕ್ಷಿಣ ನಗರಪಾಲಿಕೆಗಳು ಕೂಡ ಉತ್ತಮ ಸಾಧನೆ ದಾಖಲಿಸಿವೆ. ಒಟ್ಟಾರೆ, ಜಿಬಿಎ ವ್ಯಾಪ್ತಿಯ ನಗರಪಾಲಿಕೆಗಳ ತೆರಿಗೆ ಸಂಗ್ರಹದ ವೇಗ ಈ ಬಾರಿ ದಾಖಲೆ ನಿರ್ಮಿಸುವ ಸೂಚನೆ ನೀಡಿದೆ.
ಇದನ್ನೂ ಓದಿ : ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ 55 ಹುದ್ದೆಗಳ ನೇಮಕಾತಿ : 1.55 ಲಕ್ಷ ರೂ. ಸಂಬಳ



















