ಬೆಂಗಳೂರು : ನಗರದಲ್ಲಿ ಮತ್ತೆ ನೇಪಾಳ ಮೂಲದವರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗುತ್ತಿಗೆದಾರನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯೇ 25 ಲಕ್ಷ ನಗದು ಕಳವು ಮಾಡಿದ್ದು, ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಕಾವತಿ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಬಂಧಿತರನ್ನು ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಎಂದು ಗುರುತಿಸಲಾಗಿದೆ. ದಂಪತಿ ಕಳೆದ ಒಂದು ತಿಂಗಳಿನಿಂದ ಗುತ್ತಿಗೆದಾರನ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೀತಾ ಬಿಸ್ತಾ ಮನೆ ಕೆಲಸ ಮಾಡುತ್ತಿದ್ದರೆ, ಪವನ್ ಬಿಸ್ತಾ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.
ಗುತ್ತಿಗೆದಾರರು ಕೆಲಸಗಾರರಿಗೆ ವೇತನ ನೀಡಲು ಮನೆಯ ಕಬೋರ್ಡ್ನಲ್ಲಿ ₹25 ಲಕ್ಷ ನಗದು ಇಟ್ಟುಕೊಂಡಿದ್ದರು. ಸುಮಾರು ಒಂದು ವಾರದ ಹಿಂದೆ ಮನೆಯವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಬಳಿಕ ಮನೆಗೆ ವಾಪಸ್ ಬಂದಾಗ ನೇಪಾಳಿ ದಂಪತಿ ಕಾಣೆಯಾಗಿದ್ದರು. ಇದರಿಂದ ಅನುಮಾನಗೊಂಡ ಮನೆಯವರು ಪರಿಶೀಲನೆ ನಡೆಸಿದಾಗ ಕಬೋರ್ಡ್ನಲ್ಲಿದ್ದ 25 ಲಕ್ಷ ನಗದು ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಕೆಂಗೇರಿ ಬಳಿ ವಾಸವಿದ್ದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ದಂಪತಿಯನ್ನು ಕದ್ದ ನಗದು ಹಣದೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲಂಡನ್ನಲ್ಲಿ ಮಗನ ಜೊತೆ 36ನೇ ಮಹಡಿಯಿಂದ ಜಿಗಿದು ಮುಂಬೈ ಮೂಲದ ದಂಪತಿ ಆತ್ಮಹತ್ಯೆ?



















