ಬೆಂಗಳೂರು: ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿದ್ದು, ನೌಕರರು ಹಾಗೂ ಪಿಂಚಣಿದಾರರು ವೇತನ, ಪಿಂಚಣಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವೇತನ ಆಯೋಗವು ಕಾರ್ಯನಿರ್ವಹಿಸುತ್ತಿದ್ದು, ಶಿಫಾರಸುಗಳನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ನೌಕರರು, ಪಿಂಚಣಿದಾರರಿಂದ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. ಇದರ ಮಧ್ಯೆಯೇ, ಆನ್ ಲೈನ್ ವಂಚನೆಯ ಕುರಿತು ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಹೌದು, ಸೈಬರ್ ವಂಚಕರು ಕೇಂದ್ರ ಸರ್ಕಾರಿ ನೌಕರರಿಗೆ ಎಪಿಕೆ ಫೈಲ್ ಗಳನ್ನು ಕಳುಹಿಸುವ ಮೂಲಕ ವಂಚಿಸಲಾಗುತ್ತಿದೆ ಎಂಬ ಪ್ರಕರಣಗಳು ಬಯಲಾದ ಹಿನ್ನೆಲೆಯಲ್ಲಿ ಸರ್ಕಾರವು ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರದಿಂದ ನೌಕರರು ಅಥವಾ ಪಿಂಚಣಿದಾರರಿಗೆ ಯಾವುದೇ ಎಪಿಕೆ ಫೈಲ್ ಕಳುಹಿಸುವುದಿಲ್ಲ. ವಾಟ್ಸ್ ಆ್ಯಪ್ ಮೂಲಕವೂ ಯಾವುದೇ ಸಂವಹನ, ಸಂಪರ್ಕ ನಡೆಸುವುದಿಲ್ಲ. ಹಾಗಾಗಿ, ನೌಕರರು ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ತಿಳಿಸಿದೆ.
ಏನಿದು ಸೈಬರ್ ವಂಚನೆ?
ಆನ್ ಲೈನ್ ವಂಚಕರು ಸರ್ಕಾರಿ ನೌಕರರಿಗೆ ವಾಟ್ಸ್ ಆ್ಯಪ್ ಮೂಲಕ ಎಪಿಕೆ ಫೈಲ್ ಕಳುಹಿಸುತ್ತಾರೆ. ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ಶಿಫಾರಸುಗಳಂತೆ ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ? ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಎಷ್ಟು ಜಾಸ್ತಿಯಾಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಈ ಆ್ಯಪ್ (ಎಪಿಕೆ ಫೈಲ್) ಬಳಸಿ ಎಂಬುದಾಗಿ ಸೂಚಿಸಲಾಗುತ್ತಿದೆ. ಇದನ್ನು ನಂಬಿ ನೌಕರರು ಎಪಿಕೆ ಫೈಲ್ ಮೇಲೆ ಕ್ಲಿಕ್ ಮಾಡಿದರೆ, ಯಾವುದೇ ಲಿಂಕ್ ಓಪನ್ ಮಾಡಿದರೆ ವಂಚನೆಗೀಡಾಗುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸರ್ಕಾರವೀಗ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಾರುಕಟ್ಟೆಯಲ್ಲಿ ಹಣ ದುಪ್ಪಟ್ಟು ಮಾಡುವುದು, ಹೂಡಿಕೆಗೆ ಎರಡು ಪಟ್ಟು ಹಣ ನೀಡುವುದು, ಡಿಜಿಟಲ್ ಅರೆಸ್ಟ್ ಸೇರಿ ಹಲವು ವಂಚನೆ ಜಾಲಗಳು ಪತ್ತೆಯಾಗುತ್ತಿವೆ. ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ 60 ಲಕ್ಷಕ್ಕೂ ಹೆಚ್ಚಿನ ಪಿಂಚಣಿದಾರರು 8ನೇ ವೇತನ ಆಯೋಗದ ವ್ಯಾಪ್ತಿಗೆ ಬರುತ್ತಾರೆ. ಇವರನ್ನು ಗುರಿಯಾಗಿಸಿ ಈಗ ವಂಚಕರು ಬಲೆ ಬೀಸುತ್ತಿರುವ ಕಾರಣ ಸರ್ಕಾರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆಯ ಮಹಾಕುಂಭ | 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, 2.5 ಲಕ್ಷ ಪ್ರೇಕ್ಷಕರು ಭಾಗಿ



















