ಬೆಂಗಳೂರು : ನಗರದ ಬಾಣಸವಾಡಿ ವ್ಯಾಪ್ತಿಯಲ್ಲಿ 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಲೆಟ್ ಡೈಸಿ (2) ಮೃತಪಟ್ಟ ಮಗು ಎಂದು ಗುರುತಿಸಲಾಗಿದ್ದು, ಘಟನಾ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಗುವಿನ ತಂದೆ ಜೇಸನ್ ಆಂಥೋನಿ ಮತ್ತು ತಾಯಿ ರೋಸ್ಲಿನ್ ಹಲವು ವರ್ಷಗಳಿಂದ ಲಿವ್-ಇನ್ ರಿಲೇಷನ್‌ನಲ್ಲಿದ್ದು, ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ ಜನಿಸಿದ್ದ ಹೆಣ್ಣು ಮಗು ಕಾರ್ಲೆಟ್ ಡೈಸಿಗೆ ಮೊನ್ನೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ.
ಆದರೆ, ಇದೀಗ ದಂಪತಿಯ ಸ್ನೇಹಿತೆ ನೀಡಿರುವ ದೂರು ಪ್ರಕರಣಕ್ಕೆ ದೊಡ್ಡ ತಿರುವಾಗಿದೆ. ಮಗುವಿನ ತಾಯಿ ಆಗಾಗ ಮಗುವಿಗೆ ಹೊಡೆಯುತ್ತಿದ್ದರು, ಅದನ್ನು ತಾನು ನೋಡಿದ್ದೇನೆ. ಮಗುವಿನ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಬೇಕು ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಲ್ಲದೆ, ಮಗುವಿನ ದೇಹದ ಮೇಲೆ ಕೆಲವು ಕಡೆ ಗಾಯದ ಗುರುತುಗಳು ಕಂಡುಬಂದಿರುವುದರಿಂದ ಸಾವಿನ ಬಗ್ಗೆ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ (BNSS) ಸೆಕ್ಷನ್ 194(4) ಅಡಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮಗುವಿನ ಸಾವಿಗೆ ನಿಖರ ಕಾರಣ ಏನು ಎಂಬುದು ಸ್ಪಷ್ಟವಾಗಲಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಟ್ರಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ; ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು!



















