ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ವ್ಯಾಪ್ತಿಯ ಕೆಂಗಾಪುರ ಗ್ರಾಮದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತಿಭಾವದ ನಡುವೆ 50ನೇ ಮುಳ್ಳು ಗದ್ದುಗೆ ಉತ್ಸವ ಅದ್ದೂರಿಯಾಗಿ ನೆರವೇರಿತು.
ಗ್ರಾಮದ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳು ಅವರು ಮುಳ್ಳಿನ ಗದ್ದುಗೆ ಮೇಲೆ ಕುಳಿತು ಕುಣಿಯುವ ಮೂಲಕ ಭಕ್ತರಲ್ಲಿ ಆಶ್ಚರ್ಯ ಹಾಗೂ ಭಕ್ತಿ ಭಾವನೆ ಮೂಡಿಸಿದ್ದಾರೆ.
ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಈ ವಿಶೇಷ ಉತ್ಸವದಲ್ಲಿ, ಸ್ವಾಮೀಜಿ ಮುಳ್ಳಿನ ಪಲ್ಲಕ್ಕಿ ಮೇಲೆ ಆಸೀನರಾಗಿ ಗ್ರಾಮದಲ್ಲಿ ಮೆರವಣಿಗೆ ನಡೆಸುವುದು ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ವರ್ಷವೂ ಸಾವಿರಾರು ಭಕ್ತರು ಭಾಗವಹಿಸಿ ಮುಳ್ಳು ಗದ್ದುಗೆ ಉತ್ಸವಕ್ಕೆ ಸಾಕ್ಷಿಯಾದರು.
ಮುಳ್ಳು ಗದ್ದುಗೆ ಮೇಲೆ ಸ್ವಾಮೀಜಿಯ ಆಸನ ಹಾಗೂ ಕುಣಿತವನ್ನು ಭಕ್ತರು ಪವಾಡವೆಂದು ಕೊಂಡಾಡಿದರು. ಗ್ರಾಮದೆಲ್ಲೆಡೆ ಭಕ್ತಿ ಸಂಭ್ರಮ ಮನೆ ಮಾಡಿದ್ದು, ಜಾತ್ರೆ ಸಮಾರಂಭ ಭಕ್ತರ ಜಯಘೋಷಗಳ ನಡುವೆ ಯಶಸ್ವಿಯಾಗಿ ನಡೆಯಿತು.
ಮುಳ್ಳು ಗದ್ದುಗೆ ಉತ್ಸವವೆಂದರೆ ಕೆಂಗಾಪುರ ಗ್ರಾಮಕ್ಕೆ ವಿಶಿಷ್ಟ ಗುರುತಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ : ರಾಯಚೂರು | ಶಿವರಾತ್ರಿ ಅಂಗವಾಗಿ ಮಂತ್ರಾಲಯಕ್ಕೆ ಹರಿದುಬಂದ ಭಕ್ತಸಾಗರ



















