ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಮಗನೇ ತನ್ನ ತಂದೆ–ತಾಯಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ HAL ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುಮಾರು 7.30ರ ವೇಳೆಗೆ ಅಪಾರ್ಟ್‌ಮೆಂಟ್‌ನಲ್ಲೇ ಈ ಘಟನೆ ಸಂಭವಿಸಿದೆ. ನಿವೃತ್ತ ನೆವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ (60) ಹಾಗೂ ದಂತ ವೈದ್ಯೆಯಾಗಿದ್ದ ಡಾ. ಶ್ಯಾಮಲಾ ಭಟ್ (55) ಕೊಲೆಯಾದವರು. ಪುತ್ರ ರೋಹನ್ ಭಟ್ (33) ಬೆಳಿಗ್ಗೆ ಚಾಕುವಿನಿಂದ ಇರಿದು ದಾಳಿ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ HAL ಪೊಲೀಸರು ಆರೋಪಿ ರೋಹನ್ ಭಟ್‌ನನ್ನು ಬಂಧಿಸಿದ್ದಾರೆ.
ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕುಟುಂಬದ ಮಗಳು ವಿದೇಶದಲ್ಲಿದ್ದು, ಅವರು ನಾಳೆ ನಗರಕ್ಕೆ ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು HAL ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮೈಸೂರು | ಶಾಲಾ ಮಗುವಿನ ಬ್ಯಾಗಲ್ಲಿ ನಾಗರ ಹಾವು ಪ್ರತ್ಯಕ್ಷ!


















