ನವದೆಹಲಿ: ಟಿ20 ವಿಶ್ವಕಪ್ 2026ರ ತನ್ನ ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಈಗ ಶುಭ ಸುದ್ದಿಯೊಂದು ಸಿಕ್ಕಿದೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸಂಪೂರ್ಣ ಚೇತರಿಸಿಕೊಂಡಿದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಸ್ನಾಯು ಸೆಳೆತ ಮತ್ತು ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದ ಸುಂದರ್, ನಂತರದ ಟಿ20 ಸರಣಿ ಮತ್ತು ವಿಶ್ವಕಪ್‌ನ ಮೊದಲ ಪಂದ್ಯಕ್ಕೆ ಲಭ್ಯವಿರಲಿಲ್ಲ. ಆದರೆ, ಇದೀಗ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ದೆಹಲಿಯಲ್ಲಿ ನಡೆಯಲಿರುವ ನಮೀಬಿಯಾ ವಿರುದ್ಧದ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ.
ತಂಡಕ್ಕೆ ಹೇಗೆ ಲಾಭ?
ಮೊದಲ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತ ಕಂಡಿತ್ತು. ವಾಷಿಂಗ್ಟನ್ ಸುಂದರ್ ಆಗಮನದಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ತಂಡಕ್ಕೆ ಸಮತೋಲನ ಸಿಗಲಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸ್ಪಿನ್ ತಂತ್ರಗಾರಿಕೆಗೆ ಸುಂದರ್ ಸೇರ್ಪಡೆ ಹೆಚ್ಚು ಬಲ ತುಂಬಲಿದೆ.
ಯಾರ ಜಾಗಕ್ಕೆ ಸುಂದರ್?
ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ರಿಂಕು ಸಿಂಗ್ ಬದಲು ಸುಂದರ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ರಿಂಕು ಯುಎಸ್‌ಎ ವಿರುದ್ಧ ಕೇವಲ 6 ರನ್ ಗಳಿಸಿ ಪರದಾಡಿದ್ದರು. ಸುಂದರ್ ಅವರ ಆಲ್ ರೌಂಡ್ ಸಾಮರ್ಥ್ಯವು ತಂಡಕ್ಕೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಸುಂದರ್, ಕಳೆದ ಒಂದು ವಾರದಿಂದ ಯಾವುದೇ ಅಡೆತಡೆಯಿಲ್ಲದೆ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.
ಭಾರತ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 12 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ: ಟೀಕಾಕಾರರ ಬಾಯಿ ಮುಚ್ಚಿಸಿದ ವೈಭವ್ ಸೂರ್ಯವಂಶಿ | U19 ವಿಶ್ವಕಪ್ ಫೈನಲ್‌ನಲ್ಲಿ 175 ರನ್‌ಗಳ ವೀರಾವೇಶ!



















