ಚಾಮರಾಜನಗರ : ಬಂಡೀಪುರ ಅರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಚಾಮರಾಜನಗರದಲ್ಲಿ ಇಂದು ಬೆಳಂಬೆಳಿಗ್ಗೆ ಭಾರಿ ಪ್ರತಿಭಟನೆ ನಡೆಯಿತು. ಸಂಜೀವಿನಿ ಟ್ರಸ್ಟ್ ಹಸಿರು ಪಡೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಕ್ಕಳು ಮೂಕ ಪ್ರಾಣಿಗಳ ವೇಷ ಧರಿಸಿ ಭಾಗವಹಿಸಿದ್ದು, ಪರಿಸರ ರಕ್ಷಣೆಯ ಸಂದೇಶ ನೀಡಿದರು.
ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕರ್ನಾಟಕ–ಕೇರಳ ನಡುವಿನ 24 ಗಂಟೆಗಳ ಸಂಚಾರಕ್ಕಾಗಿ ಸುರಂಗ ಮಾರ್ಗ ನಿರ್ಮಾಣದ ಯೋಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕೇರಳದ ಒತ್ತಡಕ್ಕೆ ಮಣಿದು ಕೇಂದ್ರ ಭೂ ಸಾರಿಗೆ ಇಲಾಖೆ ಅಧ್ಯಯನ ಸಮಿತಿ ರಚಿಸಲು ಮುಂದಾಗಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಸುರಂಗ ಮಾರ್ಗ ನಿರ್ಮಾಣವಾದರೆ ಪರಿಸರಕ್ಕೆ ಭಾರೀ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ನಾಶ, ಅಂತರ್ಜಲ ಕುಸಿತ, ಭೂ ಕುಸಿತದ ಭೀತಿ ಹೆಚ್ಚಾಗುವ ಜೊತೆಗೆ ಮಾನವ–ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಬಂಡೀಪುರ ಅರಣ್ಯದಲ್ಲಿ ಸುರಂಗ ಮಾರ್ಗ ಬೇಡ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ : ಕ್ಯಾಸಿನೊ ಇಂಟಿಗ್ರೇಶನ್ ಹೆಸರಲ್ಲಿ ನಟಿಯರ ದುರ್ಬಳಕೆ ಆರೋಪ | ಸಿನಿ ಸ್ಟಾರ್ಸ್‌ಗಳ ವಿರುದ್ಧ ದೂರು


















