ಚಾಮರಾಜನಗರ : ಜಿಲ್ಲೆಯಲ್ಲಿ ಚಿರತೆಯ ಅಟ್ಟಹಾಸ ಮಿತಿ ಮೀರಿದೆ. 15 ದಿನಗಳ ಹಿಂದೆ ನಾಗಮಲೆ ಅರಣ್ಯ ಪ್ರದೇಶದಲ್ಲಿ ಪಾದಯಾತ್ರಿ ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಹಿನ್ನೆಲೆ ಕಳೆದ 15 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಈ ಪ್ರಾಣಿ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಹಾಡಿ ಬಳಿ ಇಟ್ಟಿದ್ದ ಬೋನಿನಲ್ಲಿ ಹೆಣ್ಣು ಚಿರತೆಯು ಸೆರೆಯಾಗಿದ್ದು, ಕಾಡಂಚಿನ ಗ್ರಾಮಸ್ಥರು ಹಾಗೂ ಮಲೆ ಮಹದೇಶ್ವರ ಬೆಟ್ಟದ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಾಲಕನನ್ನು ಕೊಂದಿದ್ದು ಇದೇ ಚಿರತೆ ಎಂಬುದಕ್ಕೆ ಸದ್ಯಕ್ಕೆ ಯಾವ ಸಾಕ್ಷಿಯೂ ಇಲ್ಲದ ಕಾರಣ ಚಿರತೆ ಸ್ಯಾಂಪಲ್ ಕಲೆಕ್ಟ್ ಮಾಡಿ FSLಗೆ ಕಳುಹಿಸಲಾಗಿದೆ.
ಮುಖ್ಯಾಂಶಗಳು
- ಹನೂರು ತಾಲೂಕಿನ ಇಂಡಿಗನತ್ತ ಹಾಡಿಯಲ್ಲಿ ನರಭಕ್ಷಕ ಹೆಣ್ಣು ಚಿರತೆ ಕೊನೆಗೂ ಸೆರೆಯಾಗಿದೆ.
- ಬಾಲಕನನ್ನು ಕೊಂದ ಚಿರತೆ ಇದೇನಾ ಎಂದು ತಿಳಿಯಲು ಎಫ್‌ಎಸ್‌ಎಲ್‌ಗೆ ಸ್ಯಾಂಪಲ್ ರವಾನೆ.
- ಸೆರೆಯಾದ ಚಿರತೆಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುವುದು.
ಹಗಲಿರುಳೆನ್ನದೆ ನಡೆಸಿದ್ದ ಕಾರ್ಯಾಚರಣೆ ಕೊನೆಗೂ ಸಕ್ಸಸ್
ಕೆಲ ದಿನಗಳ ಹಿಂದೆ ಹರ್ಷಿತ್ ಎಂಬ ಬಾಲಕ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದ. ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕತೆ ಮುಗಿಸಿತ್ತು.
ಅಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವೈಲ್ಡ್ ಲೈಫ್ ಸಿಬ್ಬಂದಿ ಜಂಟಿಯಾಗಿ ಈ ಬೃಹತ್ ಕಾರ್ಯಾಚರಣೆ ನಡೆಸಿದ್ದರು. ಸುಮಾರು 30 ಮಂದಿ ಚಿರತೆ ತಜ್ಞರು, ಶಾರ್ಪ್ ಶೂಟರ್ಸ್ ಹಾಗೂ ಅರಣ್ಯ ವೀಕ್ಷಕರು (Watchers) ಕಳೆದ ಎರಡು ವಾರಗಳಿಂದ ಹಗಲಿರುಳು ದಟ್ಟ ಅರಣ್ಯದಲ್ಲಿ ಕೂಂಬಿಂಗ್ ನಡೆಸುತ್ತಿದ್ದರು. ಈ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೂ ಚಿರತೆ ಬರೋಬ್ಬರಿ 5 ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ತಿನ್ನುವ ಮೂಲಕ ಅರಣ್ಯ ಸಿಬ್ಬಂದಿಯ ನಿದ್ದೆಗೆಡಿಸಿತ್ತು.
ಸದ್ಯ ಬೋನಿನಲ್ಲಿ ಸಿಲುಕಿರುವ ಚಿರತೆಯೇ ನಾಗಮಲೆಯಲ್ಲಿ ಹರ್ಷಿತ್ ಎಂಬ ಬಾಲಕನನ್ನು ಕೊಂದ ನರಭಕ್ಷಕನಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಸೆರೆಯಾದ ಚಿರತೆಯ ಲಾಲಾರಸ, ಮಲ ಮತ್ತು ಮೂತ್ರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಸದ್ಯಕ್ಕೆ ಈ ಚಿರತೆಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲು ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.


















